ಕಾರವಾರ: ನಗರದ ಎಜುಕೇಷನ್ ಸೊಸೈಟಿ ಬಾಲಮಂದಿರ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಹಾಗೂ ತವರು¬ನಾಡಿಗೆ ಕೀರ್ತಿ ತಂದಿದ್ದಾರೆ. ಗುರುಕುಲ ಕಲಾಪ್ರಗತಿ ಕೇಂದ್ರದ ಕರಾಟೆ ತರಗತಿಯಲ್ಲಿ ಕರಾಟೆ ಗುರು ಪ್ರದೀಪ್ ಬಾಂದೇಕರ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆದ ಈ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಂಡಿದ್ದಾರೆ.
ಸ್ಪರ್ಧೆಯ ಕಲರ್ ಬೆಲ್ಟ್ ವಿಭಾಗದಲ್ಲಿ ವಿಭಾ ಎ., ನಿರ್ಮಯ್ ಕಿತ್ತೂರ, ಕುಮಿಟೆ ಹಾಗೂ ಕಟಾ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾರೆ. ಅಧೃತಿ ಥೋಲಾರ್, ಧ್ರುವ ನಾಯ್ಕ್, ಬಿ. ರಿತೀಶ್ ಮತ್ತು ಅದ್ವೈತ ನಾಯಕ್ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇನ್ನು ಆದಿಶ್ ಬಾಂದೇಕರ್ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದರೆ, ಅಭಿಜಿತ್ ಸಿಂಗಾನ್ಕುಳಿ ಕುಮಿಟೆ ವಿಭಾಗದಲ್ಲಿ ದ್ವಿತೀಯ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಸುಪಶ್ ರೆಕರ್ ಹಾಗೂ ರುದ್ರ ಮಹಾಂತಿ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬ್ರೌನ್ ಬೆಲ್ಟ್ ಕೆಟಗರಿಯಲ್ಲಿ ವಿದ್ಯಾರ್ಥಿಯೊಬ್ಬರು ಕುಮಿಟೆ ಮತ್ತು ಕಟಾ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ್ದಾರೆ. ಇನ್ನು ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಪ್ರೀತಮ್ ತೊಗುಣಸಿ ಹಾಗೂ ರಿಷಿಕಾ ಗೌಡ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರೀತಮ್ ಪಟಗಾರ ಕುಮಿಟೆ ವಿಭಾಗದಲ್ಲಿ ದ್ವಿತೀಯ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದರೆ, ಹರ್ಷಾಲ ಮಾಣಿ ಅವರು ಕುಮಿಟೆ ಮತ್ತು ಕಟಾ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ಕರಾಟೆ ಪಟುಗಳ ಸಾಧನೆಯ ಹಾದಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಾಲ ಮಂದಿರ ಶಾಲಾ ವಿದ್ಯಾರ್ಥಿಗಳ ಜಯಭೇರಿ ಸಾಧನೆ
