ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ರೈತರ ಸಾಲ ವಸೂಲಿಗೆ ಬಲವಂತ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

Pakka News Web • 17 ಆಕ್ಟೋ 2026,

ಕಾರವಾರ: ಜಿಲ್ಲೆಯ ಬರಪೀಡಿತ ತಾಲ್ಲೂಕುಗಳಲ್ಲಿ ರೈತರು ಬ್ಯಾಂಕ್ಗಳಿಂದ ಕೃಷಿ ಉದ್ದೇಶಕ್ಕಾಗಿ ಪಡೆದಿರುವ ಸಾಲದ ಬಾಕಿಯನ್ನು ವಸೂಲಿ ಮಾಡಲು ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಎಚ್ಚರಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಮೀರುವ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಹವಾಮಾನ ವೈಪರೀತ್ಯದಿಂದಾಗಿ ಮುಂಡಗೋಡು, ಯಲ್ಲಾಪುರ, ಅಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ, ಜೋಯಿಡಾ ಮತ್ತು ದಾಂಡೇಲಿ ತಾಲ್ಲೂಕುಗಳನ್ನು ಸರ್ಕಾರವು ಬರಪೀಡಿತ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹಾಗೂ ಕೃಷಿ ಆಧಾರಿತ ಉದ್ಯಮಗಳಿಗೆ ರೈತರು ಪಡೆದಿರುವ ಸಾಲದ ಕಂತುಗಳನ್ನು ಒತ್ತಾಯಪೂರ್ವಕವಾಗಿ ವಸೂಲಿ ಮಾಡದಂತೆ ಅವರು ಎಲ್ಲಾ ಬ್ಯಾಂಕ್ಗಳಿಗೆ ಸೂಚಿಸಿದರು. ಅಲ್ಲದೆ, ಸರ್ಕಾರದ ಮಾರ್ಗಸೂಚಿಯಂತೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿ, ಅದನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಸ್ವಯಂ ಚಾಲಿತವಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಿದರು.

ಬರಗಾಲದ ಸಂಕಷ್ಟದಿಂದ ಆರ್ಥಿಕ ತೊಂದರೆಗೊಳಗಾಗಿರುವ ರೈತರು ಅನಧಿಕೃತ ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇವಿಗಾರರ ಬಲೆಗೆ ಬೀಳುವುದನ್ನು ತಡೆಯಲು, ಬ್ಯಾಂಕ್ಗಳು ರೈತರಿಗೆ ಆದ್ಯತೆಯ ಮೇರೆಗೆ ಹೊಸ ಸಾಲಗಳನ್ನು ಮಂಜೂರು ಮಾಡಬೇಕು ಎಂದು ಅವರು ತಿಳಿಸಿದರು. ಬಿಕ್ಕಟ್ಟಿನ ಈ ಸಂದರ್ಭದಲ್ಲಿ ರೈತರ ನೆರವಿಗೆ ಲಭ್ಯವಿರುವ ವಿವಿಧ ಆರ್ಥಿಕ ಸೌಲಭ್ಯಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ತಾಕೀತು ಮಾಡಿದರು.

ಎಲ್ಲಾ ಬ್ಯಾಂಕ್ಗಳು ತಮ್ಮ ವ್ಯಾಪ್ತಿಯ ರೈತರಿಗೆ ನೀಡಿರುವ ಆರ್ಥಿಕ ನೆರವಿನ ಸಂಪೂರ್ಣ ಮಾಹಿತಿ ಮತ್ತು ಸೂಕ್ತ ದಾಖಲೆಗಳನ್ನು ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಪ್ರಸ್ತುತಪಡಿಸಬೇಕು ಎಂದು ಡಾ. ದಿಲೀಷ್ ಶಶಿ ಸೂಚಿಸಿದರು. ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ಕಾರ ಘೋಷಿಸಿರುವ ಬರ ಪರಿಹಾರ ಹಾಗೂ ಬ್ಯಾಂಕಿಂಗ್ ನೆರವು ಕ್ರಮಗಳ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ತಲುಪಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸದಿ, ನಬಾರ್ಡ್ ಮ್ಯಾನೇಜರ್ ಸುಶೀಲ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ರಾಜಪ್ಪ ಹಾಗೂ ವಿವಿಧ ಇಲಾಖೆಗಳು ಮತ್ತು ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250