ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ದಿವಾಳಿ: ಎಚ್. ಎನ್. ಚಂದ್ರಶೇಖರ್

Pakka News Web • 26 ಜೂನ್ 2026,

ಕಾರವಾರ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಆರ್ಥಿಕವಾಗಿ ಸುಭಿಕ್ಷವಾಗಿದ್ದ ಕರ್ನಾಟಕವನ್ನು ಸಂಪೂರ್ಣವಾಗಿ ದಿವಾಳಿ ಮಾಡಿರುವುದೇ ಈ ಸರ್ಕಾರದ ಸಾಧನೆಯಾಗಿದೆ. ಇಂತಹ ಕೆಟ್ಟ ಆಡಳಿತ ಇನ್ನು ಎರಡು ವರ್ಷ ಮುಂದುವರಿದರೆ ಜನಸಾಮಾನ್ಯರಿಗೆ ನರಕ ದರ್ಶನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ಸ್ಥಿತಿಯನ್ನು ಕೆಟ್ಟು ನಿಂತಿರುವ ಬಸ್ಸಿಗೆ ಹೋಲಿಸಿದರು. “ರಾಜ್ಯ ಸರ್ಕಾರ ಎಂಜಿನ್ ಕೆಟ್ಟು, ಟಯರ್ ಪಂಚರ್ ಆಗಿರುವ ಹಳೆಯ ಬಸ್ಸಿನಂತಾಗಿದೆ. ಕಾಂಗ್ರೆಸ್‌ನವರು ಕೇವಲ ಅದರ ಚಾಲಕನನ್ನು (ಮುಖ್ಯಮಂತ್ರಿ) ಬದಲಾಯಿಸಿದ್ದಾರೆಯೇ ಹೊರತು ಇಡೀ ವ್ಯವಸ್ಥೆಯೇ ಹದಗೆಟ್ಟಿದೆ” ಎಂದು ವ್ಯಂಗ್ಯವಾಡಿದರು. ಈ ಆಡಳಿತ ವೈಖರಿಯ ವಿರುದ್ಧ ಸ್ವತಃ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರ್ಕಾರದ ವಿಫಲತೆಗೆ ಸಾಕ್ಷಿಯಾಗಿದೆ ಎಂದರು.

ರಾಜ್ಯದಲ್ಲಿ ಈ ಹಿಂದೆ ಯಾವಾಗಲೂ ಕೊರತೆ (ಡೆಫಿಶಿಯಟ್) ಬಜೆಟ್ ಮಂಡನೆಯಾಗಿರಲಿಲ್ಲ, ಸದಾ ಹೆಚ್ಚುವರಿ (ಸರ್‌ಪ್ಲಸ್) ಬಜೆಟ್ ಇರುತ್ತಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಾಲ ಮಾಡಿ ಕೊರತೆಯ ಬಜೆಟ್ ಮಂಡಿಸಲಾಗುತ್ತಿದೆ. ಗ್ಯಾರೆಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ಸಾಕು ಮತ್ತು ಬಜೆಟ್‌ನಲ್ಲಿ ಗ್ಯಾರೆಂಟಿ ಘೋಷಣೆಯ ನಂತರವೂ 3.70 ಲಕ್ಷ ಕೋಟಿ ರೂಪಾಯಿ ಉಳಿಯುತ್ತದೆ. ಹೀಗಿದ್ದೂ ಸರ್ಕಾರ ಒಂದು ಲಕ್ಷ ಕೋಟಿಗೂ ಅಧಿಕ ಸಾಲ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಗ್ಯಾರೆಂಟಿ ಹೆಸರಿನಲ್ಲಿ ದಿನಬಳಕೆ ವಸ್ತುಗಳು, ಹಾಲು, ಮದ್ಯ ಸೇರಿದಂತೆ ಎಲ್ಲದರ ಬೆಲೆ ಏರಿಕೆ ಮಾಡಿ ಜನರನ್ನು ವ್ಯವಸ್ಥಿತವಾಗಿ ಶೋಷಿಸಲಾಗುತ್ತಿದೆ. ಗ್ಯಾರೆಂಟಿ ನೆಪದಲ್ಲಿ 5 ಸಾವಿರ ಕೋಟಿ ಲೂಟಿ ಮಾಡಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಎಸ್‌ಸಿಪಿ-ಟಿಎಸ್‌ಪಿ ಹಣವನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ ನಾಯಕ ಮೊಗಟಾ, ಮನೋಜ್ ಭಟ್, ಸುನೀಲ್ ಸೋನಿ, ಸುಭಾಷ್ ಗುನಗಿ, ಸಂಜೀವ ಸಾಳುಂಕೆ ಹಾಗೂ ಕಿಶನ್ ಕಾಂಬ್ಳೆ ಉಪಸ್ಥಿತರಿದ್ದರು


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250