ಮಾದಕ ಪದಾರ್ಥಗಳಿಗೆ ವ್ಯಸನಿಗಳಾಗುವುದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಯುವ ಪೀಳಿಗೆಯ ಯಶಸ್ಸಿಗೆ ತಡೆಯೊಡ್ಡುವ ಡ್ರಗ್ಸ್‌ನಿಂದ ಎಲ್ಲರೂ ದೂರವಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್. ಕರೆ ನೀಡಿದರು.

ಕಾರವಾರದ ಮಯೂರ ವರ್ಮ ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ಉಪ ವಿಭಾಗ ಹಾಗೂ ಕಾರವಾರ ನಗರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಸಪ್ತಾಹ’ ಮತ್ತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾದಕ ವ್ಯಸನವು ಸಮಾಜಕ್ಕೆ ಅಂಟಿದ ಕ್ಯಾನ್ಸರ್ ಇದ್ದಂತೆ ಎಂದ ಅವರು, ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರದ ಮಯೂರ ವರ್ಮ ವೇದಿಕೆಯಿಂದ ಡಿಸಿ ಆಫೀಸ್ ವೃತ್ತ, ಸುಭಾಷ್ ಸರ್ಕಲ್ ಹಾಗೂ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೃಹತ್ ಜಾಗೃತಿ ಜಾಥಾ ನಡೆಯಿತು.

ಜಾಥಾದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ‘ಆರೋಗ್ಯವನ್ನು ಆಯ್ಕೆ ಮಾಡಿ, ಡ್ರಗ್ಸ್ ಅಲ್ಲ’ ಸೇರಿದಂತೆ ವಿವಿಧ ಜಾಗೃತಿ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಸಾರ್ವಜನಿಕರ ಗಮನ ಸೆಳೆದರು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
