ಕಾರವಾರ: ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಮತ್ತೊಮ್ಮೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಜೂನ್ 27 ರಂದು ಬಂದಿರುವ ಈ ಸಂದೇಶದಲ್ಲಿ, ಕೋರ್ಟ್‌ನ ಇ-ಸೇವಾ ಕೇಂದ್ರದಲ್ಲಿ ಐದು ಡೈನಾಮೈಟ್ ಬಾಂಬ್‌ಗಳನ್ನು ಇಡಲಾಗಿದ್ದು, ಮಧ್ಯಾಹ್ನ 2:20 ರೊಳಗೆ ನ್ಯಾಯಾಧೀಶರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಹೆದರಿಸಲಾಗಿದೆ. ‘ದುರ್ಗಾ ತೇವಿದಿಯಸ್ಟಾಲಿನ್’ ಎಂಬ ಹೆಸರಿನಿಂದ ಬಂದಿರುವ ಈ ಮೇಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನ್ಯಾಯಾಲಯದ ಆವರಣದಲ್ಲಿ ವ್ಯಾಪಕ ತಪಾಸಣೆ ನಡೆಸಿದ್ದಾರೆ. ಜೂನ್ 24 ರಂದು ಸಹ ಇದೇ ಮಾದರಿಯಲ್ಲಿ ಉದಯನಿಧಿ ಹೆಸರನ್ನು ಬಳಸಿ ಬೆದರಿಕೆ ಹಾಕಲಾಗಿತ್ತು. ಈ ಸರಣಿ ಬೆದರಿಕೆ ಇ-ಮೇಲ್‌ಗಳ ಹಿಂದಿರುವ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಇದೀಗ ತೀವ್ರ ತನಿಖೆ ಆರಂಭಿಸಿದ್ದಾರೆ.
ನಾಲ್ಕೇ ದಿನದಲ್ಲಿ ಎರಡನೇ ಬಾರಿ ಇ-ಮೇಲ್ ಬಾಂಬ್
