ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಸತತ ಮಳೆಗೆ ಗರ್ಭಗುಡಿಗೆ ನುಗ್ಗಿದ ಮಳೆ ನೀರು!

Pakka News Web • 28 ಜೂನ್ 2026,

ಉತ್ತರ ಕನ್ನಡ ಜಿಲ್ಲೆಯಾದ್ಯಂತ ರವಿವಾರ ಬೆಳಗಿನಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಗೆ ಸಾರ್ವಜನಿಕ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿದ್ದ ವರುಣ ಸಂಜೆ ವೇಳೆಗೆ ಮತ್ತಷ್ಟು ರೌದ್ರರೂಪ ತಾಳಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿಶೇಷವಾಗಿ ಕುಮಟಾ ಮತ್ತು ಗೋಕರ್ಣ ಭಾಗದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಪ್ರಳಯಸದೃಶ ಮಳೆಯಿಂದಾಗಿ ಐತಿಹಾಸಿಕ ಗೋಕರ್ಣ ಮಹಾಬಲೇಶ್ವರ ಸನ್ನಿಧಿಯ ಗರ್ಭಗುಡಿ ಜಲಾವೃತಗೊಂಡಿದ್ದು, ಪವಿತ್ರ ಆತ್ಮಲಿಂಗವು ನೀರಿನಲ್ಲಿ ಮುಳುಗಡೆಯಾಗಿದೆ.

ಸಮುದ್ರದ ತೀವ್ರ ಅಬ್ಬರ ಹಾಗೂ ಸಂಗಮ ನಾಲಾ ಕಡಲು ಸೇರುವ ಜಾಗದಲ್ಲಿ ಮರಳಿನ ದಿಬ್ಬ ಸೃಷ್ಟಿಯಾಗಿರುವುದರಿಂದ ಮಳೆ ನೀರು ಸಮುದ್ರ ಸೇರಲಾಗದೆ ಹಿಮ್ಮುಖವಾಗಿ ಹರಿದಿದೆ. ಪರಿಣಾಮವಾಗಿ, ಮಂದಿರದ ತೀರ್ಥ ಹೋಗುವ ಸೋಮಸೂತ್ರದ ನೀರು ಸಂಗಮಕ್ಕೆ ಸೇರಲಾಗದೆ ಗರ್ಭಗುಡಿಯೊಳಗೆ ನುಗ್ಗಿದೆ. ಗರ್ಭಗುಡಿ ಸಂಪೂರ್ಣ ನೀರಿನಿಂದ ತುಂಬಿದ್ದರಿಂದ ಭಕ್ತರ ದರ್ಶನಕ್ಕೆ ತೀವ್ರ ಸಮಸ್ಯೆಯುಂಟಾಗಿದ್ದು, ಸದ್ಯ ದೇವಸ್ಥಾನದ ಸಿಬ್ಬಂದಿ ಪಂಪ್ ಸೆಟ್ ಬಳಸಿ ನೀರನ್ನು ಹೊರಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಅಲ್ಲದೆ, ಸೋಮಸೂತ್ರ ನಾಲಾಕ್ಕೆ ಗೇಟ್ ಅಳವಡಿಸಿ ಹೊರಗಿನ ಹೊಲಸು ನೀರು ಒಳಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಇದೇ ವೇಳೆ, ಮುಖ್ಯ ಕಡಲತೀರಕ್ಕೆ ಸಾಗುವ ರಸ್ತೆಯ ಚರಂಡಿಯನ್ನು ಪಕ್ಕದ ಅಂಗಡಿಯವರು ಮಣ್ಣು ಹಾಕಿ ಮುಚ್ಚಿದ್ದರಿಂದ ಸುಮಾರು ಇನ್ನೂರು ಮೀಟರ್‌ಗೂ ಅಧಿಕ ರಸ್ತೆ ಕೊಳಚೆ ನೀರಿನಿಂದ ತುಂಬಿ ಹೋಗಿದೆ. ಈ ಕಲುಷಿತ ನೀರು ಉಕ್ಕಿ ದೇವಾಲಯದ ಭೋಜನ ಶಾಲೆಗೂ ನುಗ್ಗಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯ ರಭಸಕ್ಕೆ ಗೋಕರ್ಣದ ಮಹಾಗಣಪತಿ ಮುಂಭಾಗದ ರಸ್ತೆ ಮತ್ತು ಮೇಲಿನಕೇರಿ ರಸ್ತೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರ ದುಸ್ತರಗೊಂಡಿದೆ. ಕೇಣಿ-ತದಡಿ ರಾಜ್ಯ ಹೆದ್ದಾರಿಯ ನಾಡುಮಾಸ್ಕೇರಿವರೆಗೆ ಚರಂಡಿ ಸ್ವಚ್ಛಗೊಳಿಸದ ಕಾರಣ, ಗಂಗಾವಳಿಯ ಜನವಸತಿ ಪ್ರದೇಶಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿದೆ. ಇದರೊಂದಿಗೆ ತದಡಿ, ಮಾದನಗೇರಿ, ಹಿರೇಗುತ್ತಿ ಮತ್ತು ಬರ್ಗಿ ಭಾಗಗಳಲ್ಲೂ ರಸ್ತೆಗಳು ಹೊಳೆಯಂತಾಗಿದ್ದು, ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250