ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ದೈತ್ಯ ವಾಹನಗಳ ಆರ್ಭಟಕ್ಕೆ ರಸ್ತೆ ಬರ್ಬಾದ್!

Pakka News Web • 29 ಜೂನ್ 2026,

ಕೈಗಾ 5 ಮತ್ತು 6ನೇ ಅಣು ವಿದ್ಯುತ್ ಯೋಜನೆಯ ಹೆಸರಿನಲ್ಲಿ ಹಗಲಿರುಳು ಸಂಚರಿಸುತ್ತಿರುವ ಭಾರೀ ತೂಕದ ದೈತ್ಯ ವಾಹನಗಳ ದರ್ಬಾರ್‌ಗೆ ಕಾರವಾರ-ಕೈಗಾ ಮುಖ್ಯ ರಸ್ತೆ ಹಾಗೂ ಮಲ್ಲಾಪುರ-ಬೆಲವೇ ಸಂಪರ್ಕ ರಸ್ತೆ ಸಂಪೂರ್ಣವಾಗಿ ಬಲಿಯಾಗಿದೆ.

ನೂರಾರು ಟನ್ ತೂಕದ ಯಂತ್ರೋಪಕರಣಗಳನ್ನು ಹೊತ್ತು ಸಾಗುವ ಈ ಬೃಹತ್ ವಾಹನಗಳ ನಿರಂತರ ಆಕ್ರಮಣದಿಂದಾಗಿ ರಸ್ತೆಗಳು ಇದ್ದ ಜಾಗದಲ್ಲಿ ಈಗ ಕೇವಲ ಮರಣಸದೃಶ ಹೊಂಡಗಳು ಮಾತ್ರ ಕಾಣಿಸುತ್ತಿವೆ. ರಸ್ತೆಯ ಮೇಲ್ಮೈ ಸಂಪೂರ್ಣವಾಗಿ ಕಿತ್ತುಹೋಗಿದ್ದು, ಹಲವೆಡೆ ರಸ್ತೆಯೇ ಕುಸಿದು ಬೀಳುವ ಭೀತಿ ಎದುರಾಗಿದೆ. ಪರಿಣಾಮವಾಗಿ, ದಿನನಿತ್ಯ ಸಂಚರಿಸುವ ವಾಹನಗಳು ಮಧ್ಯ ರಸ್ತೆಯಲ್ಲೇ ಸಿಲುಕಿಕೊಂಡು ಗಂಟೆಗಟ್ಟಲೆ ಸಂಚಾರದ ಜಾಲ ಸೃಷ್ಟಿಯಾಗುತ್ತಿದ್ದು, ಸಾರ್ವಜನಿಕರ ಆಕ್ರೋಶದ ಜ್ವಾಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮಲ್ಲಾಪುರ-ಬೆಲವೇ ರಸ್ತೆಯ ಚಿತ್ರಣ ಅತ್ಯಂತ ಚಿಂತಾಜನಕವಾಗಿದ್ದು, ಇತ್ತೀಚಿನ ಮಳೆಯಿಂದಾಗಿ ಇಡೀ ರಸ್ತೆ ಕೆಸರಿನ ಕೆರೆಯಂತಾಗಿ ಮಾರ್ಪಟ್ಟಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಚೇರಿಗೆ ಹೋಗುವ ನೌಕರರು ಹಾಗೂ ಕೈಗಾ ಕಾರ್ಖಾನೆಯ ದೈನಂದಿನ ಕಾರ್ಮಿಕರು ಈ ನರಕಸದೃಶ ಹಾದಿಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೊಂಡ-ಗುಂಡಿಗಳ ಸಾಮ್ರಾಜ್ಯವಾಗಿರುವ ಈ ಹಾದಿಯಲ್ಲಿ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಳ್ಳುವುದು ನಿತ್ಯದ ಪ್ರಹಸನವಾಗಿ ಮಾರ್ಪಟ್ಟಿದೆ. ಗರ್ಭಿಣಿಯರು, ವೃದ್ಧರು ಹಾಗೂ ಪಾದಚಾರಿಗಳಂತೂ ಈ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವುದು ಕೈಗಾ ಯೋಜನೆ ಅಧಿಕಾರಿಗಳ ಇಬ್ಬಂದಿ ನೀತಿ. ತಮಗೆ ಬೇಕಾದ ಆಯಕಟ್ಟಿನ ಜಾಗಗಳಲ್ಲಿ ಮಾತ್ರ ತೇಪೆ ಕಾರ್ಯ ಮಾಡುವ ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಾಗಿ ಬಳಸುವ ಮಲ್ಲಾಪುರ-ಬೆಲವೇ ಭಾಗದ ರಸ್ತೆಯನ್ನು ಸಂಪೂರ್ಣವಾಗಿ ಕಣ್ಣುಮುಚ್ಚಿ ನಿರ್ಲಕ್ಷಿಸುತ್ತಿದ್ದಾರೆ. ಈ ಬೇಜವಾಬ್ದಾರಿತನವನ್ನು ಖಂಡಿಸಿರುವ ಮಲ್ಲಾಪುರ ನಿರಾಶ್ರಿತರಾದ ಚಾಲಕ ಯೂನಿಯನ್ ಅಧ್ಯಕ್ಷ ಅಂಬರೀಷ್ ಬಾಂದೆಕರ, ಕೈಗಾ ಯೋಜನೆಯ ಭಾರೀ ವಾಹನಗಳ ಆರ್ಭಟಕ್ಕೆ ಸಾರ್ವಜನಿಕರ ರಸ್ತೆ ಸಂಪೂರ್ಣ ಧೂಳೀಪಟವಾಗಿದೆ. ಮಳೆಗಾಲ ತೀವ್ರಗೊಳ್ಳುವ ಮುನ್ನವೇ ಈ ರಸ್ತೆಯನ್ನು ಯುದ್ಧೋಪಾದಿಯಲ್ಲಿ ದುರಸ್ತಿ ಮಾಡದಿದ್ದರೆ, ಇಡೀ ಗ್ರಾಮಸ್ಥರು ಒಟ್ಟಾಗಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯುವುದು ನಿಶ್ಚಿತ ಎಂದು ತೀವ್ರ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರಿರುವ ಕೈಗಾ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಇನ್ನಾದರೂ ಎಚ್ಚೆತ್ತುಕೊಂಡು ತುರ್ತು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಹಾಗೂ ವಿವಿಧ ಸಂಘಟನೆಗಳ ಒಕ್ಕೊರಲ ಒತ್ತಾಯವಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250