ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಮತದಾರರ ಪಟ್ಟಿ ಪರಿಷ್ಕರಣೆ: ಆಯೋಗದೊಂದಿಗೆ ಬಿಜೆಪಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ – ವೆಂಕಟೇಶ ನಾಯಕ

Pakka News Web • 30 ಜೂನ್ 2026,

ಕಾರವಾರ: ಚುನಾವಣಾ ಆಯೋಗವು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಅತ್ಯಂತ ಅಚ್ಚುಕಟ್ಟಾಗಿ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಕಾಂಗ್ರೆಸ್‌ನಂತೆಯೇ ಬಿಜೆಪಿಯೂ ಸಂಪೂರ್ಣವಾಗಿ ಸಹಕರಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಯ ಮೇಲೆ ಮಾಡಿದ್ದ ‘ವೋಟ್ ಚೋರಿ’ಯ ಸುಳ್ಳು ಆರೋಪಗಳು ದೇಶದ ಇತ್ತೀಚಿನ ಚುನಾವಣೆಗಳಿಂದ ಸಂಪೂರ್ಣವಾಗಿ ಸುಳ್ಳಾಗಿವೆ. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಎಸ್‌ಐಆರ್ ನಂತರ ನಡೆದ ಚುನಾವಣೆಗಳಲ್ಲಿ ಯಾವುದೇ ನ್ಯೂನ್ಯತೆಗಳು ಕಂಡುಬಂದಿಲ್ಲ ಮತ್ತು ಯಾರೂ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಇದರಿಂದಾಗಿ ಮತದಾರರ ಪಟ್ಟಿಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದ ಕಾಂಗ್ರೆಸ್ ಪ್ರಯತ್ನ ತಲೆಕೆಳಗಾಗಿದೆ ಎಂದು ಟೀಕಿಸಿದರು.

ದೇಶದಲ್ಲಿ 2002ರ ಬಳಿಕ ಮತದಾರರ ಪಟ್ಟಿಯ ಸರಿಯಾದ ಪರಿಷ್ಕರಣೆ ನಡೆಯದ ಕಾರಣ, ವಿದೇಶಿ ನುಸುಳುಕೋರರ ಹೆಸರುಗಳು ಸೇರ್ಪಡೆಗೊಂಡು ಅವರು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿದ್ದರು. ಇದಕ್ಕೆ ಪಶ್ಚಿಮ ಬಂಗಾಳವೇ ನೇರ ಉದಾಹರಣೆಯಾಗಿದ್ದು, ಅಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಬರೊಬ್ಬರಿ 91 ಲಕ್ಷ ಅಕ್ರಮ ಮತದಾರರ ಹೆಸರುಗಳನ್ನು ರದ್ದುಗೊಳಿಸಿರುವುದೇ ಇದಕ್ಕೆ ಸಾಕ್ಷಿ. ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಕ್ರಮ ವಲಸಿಗರು ಈಗ ದೇಶ ತೊರೆಯುತ್ತಿದ್ದಾರೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನೆಲೆಸಿರುವ ನೇಪಾಳ ಹಾಗೂ ಬಾಂಗ್ಲಾದೇಶದ ಅಕ್ರಮ ವಲಸಿಗರ ಸತ್ಯ ಅನಾವರಣಗೊಳ್ಳಲಿದ್ದು, ಮಾಧ್ಯಮಗಳ ವರದಿಯ ಪ್ರಕಾರ ರಾಜ್ಯದಲ್ಲಿಯೂ ಸುಮಾರು 20 ಲಕ್ಷ ಅಕ್ರಮ ಮತದಾರರ ಹೆಸರುಗಳು ರದ್ದಾಗುವ ಸಾಧ್ಯತೆಯಿದೆ ಎಂದು ಅವರು ಗಂಭೀರ ಮಾಹಿತಿ ನೀಡಿದರು.

ಈ ಮಹತ್ವದ ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಬಿಜೆಪಿ ಈಗಾಗಲೇ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಕಾರ್ಯಕ್ಕೆ ನೆರವಾಗಲು ಬೂತ್ ಮಟ್ಟದ ಏಜೆಂಟ್‌ಗಳಾದ ಬಿಎಲ್‌ಎ-1 ಮತ್ತು ಬಿಎಲ್‌ಎ-2 ಪ್ರತಿನಿಧಿಗಳಿಗೆ ಸೂಕ್ತ ತರಬೇತಿ ನೀಡಿದೆ. ಯಾವುದೇ ಒಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಬಾರದು ಎಂಬ ಧೇಯದೊಂದಿಗೆ ಜಿಲ್ಲೆಯ ಒಟ್ಟು 1,445 ಬೂತ್‌ಗಳ ಪೈಕಿ ಬಹುತೇಕ ಕಡೆಗಳಲ್ಲಿ ಬಿಎಲ್‌ಎ-2ಗಳನ್ನು ನಿಯೋಜಿಸಲಾಗಿದೆ. ಉಳಿದ 45 ಬೂತ್‌ಗಳಲ್ಲಿ ಸಮೀಪದ ಬೂತ್‌ನ ಪ್ರತಿನಿಧಿಗಳೇ ಕಾರ್ಯನಿರ್ವಹಿಸಲು ಆಯೋಗ ಅವಕಾಶ ನೀಡಿದ್ದು, ಸಾರ್ವಜನಿಕರು ಯಾವುದೇ ಗೊಂದಲಗಳಿದ್ದಲ್ಲಿ ಬಿಜೆಪಿಯ ಬಿಎಲ್‌ಎ-2 ಪ್ರತಿನಿಧಿಗಳನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಕಿಶನ ಕಾಂಬ್ಳೆ ಹಾಗೂ ಜಗದೀಶ ನಾಯಕ ಮೊಗಟಾ ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250