ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರತೆಯಿಂದಾಗಿ ಸಂಭವಿಸಬಹುದಾದ ಭೂಕುಸಿತ ಹಾಗೂ ಇತರೆ ತುರ್ತು ಅವಘಡಗಳನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ, ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಪ್ರದೇಶಗಳಲ್ಲಿ ಜುಲೈ 6 ರಿಂದ ಮಳೆಗಾಲ ಮುಕ್ತಾಯವಾಗುವವರೆಗೆ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಹೆದ್ದಾರಿ ಪ್ರಯಾಣಿಕರ ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿವಿಧ ತಾಲೂಕುಗಳಲ್ಲಿ ನಿಷೇಧಿತ ಪ್ರದೇಶಗಳ ವಿವರ:
ಕಾರವಾರ ಮತ್ತು ಅಂಕೋಲಾ ತಾಲೂಕು ವ್ಯಾಪ್ತಿ: ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರ ಲಂಡನ್ ಬ್ರಿಡ್ಜ್‌ನಿಂದ ಬಿನಾಗಾದ ಸುರಂಗದ ಅಂತ್ಯದವರೆಗಿನ ಎರಡೂ ಬದಿಯ ಚತುಷ್ಪಥ ಹೆದ್ದಾರಿ ಮಾರ್ಗದ 750 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ಅರ್ಗಾದಲ್ಲಿರುವ ಸಂಕ್ರುಭಾಗ್ ಘಟ್ಟದ ಎಡಬದಿಯ 100 ಮೀಟರ್ ಹಾಗೂ ಸಂಕ್ರುಬಾಗ್ ಜಿ.ಕೆ. ರಾಮಕ್ವಾರಿಯ ಹತ್ತಿರದ 100 ಮೀಟರ್ ಪ್ರದೇಶದಲ್ಲಿ ನಿಷೇಧ ಜಾರಿಯಲ್ಲಿರಲಿದೆ. ಅಂಕೋಲಾ ತಾಲೂಕಿನ ಚತುಷ್ಪಥ ರಸ್ತೆಯ ಶಿರೂರು ಗ್ರಾಮದಲ್ಲಿ ಐ.ಆರ್.ಬಿ ಕಂಪನಿಯವರು ಗುಡ್ಡ ಕೊರೆದಿರುವ 1 ಕಿಲೋಮೀಟರ್ ವ್ಯಾಪ್ತಿಯ ಜಾಗ ಹಾಗೂ ಚತುಷ್ಪಥ ರಸ್ತೆಯ ಬೆಳ್ಳೆನ್ ರೈಲ್ವೆ ಬ್ರಿಡ್ಜ್‌ನಿಂದ ಕುಮಟಾ ಕಡೆಗೆ ಹೋಗುವ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೊನ್ನಾವರ ಮತ್ತು ಕುಮಟಾ ತಾಲೂಕು ವ್ಯಾಪ್ತಿ: ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಮತ್ತು 69ರ ವ್ಯಾಪ್ತಿಯಲ್ಲಿ ಬರುವ ಕ್ಲಾಸಿಕ್ ವೈನ್ ಶಾಪ್ ಎದುರಿನ ಗುಣಗುಣಕೇರಿ, ಪ್ರಮೀಳಾ ರೆಸ್ಟೋರೆಂಟ್ ಹತ್ತಿರ, ಮೂಡಕಣಿ (ಖರ್ವಾ ಕ್ರಾಸ್), ಸೂಳೆಮೂರ್ಕಿ ಕ್ರಾಸ್ ಹಾಗೂ ಕರ್ಕಿನಾಕಾ ಹತ್ತಿರದ ತಲಾ 30 ಮೀಟರ್ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಬ್ರೇಕ್ ಹಾಕಲಾಗಿದೆ. ಇನ್ನು ಕುಮಟಾ ತಾಲೂಕಿನ ದಿವಗಿ ಹಾಗೂ ದುಂಡಕುಳಿ ಪ್ರದೇಶಗಳ ಹತ್ತಿರದ ತಲಾ 200 ಮೀಟರ್ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಶಿರಸಿ ತಾಲೂಕು ವ್ಯಾಪ್ತಿ: ಮಲೆನಾಡು ಭಾಗದ ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-766ಇ ಮಾರ್ಗದಲ್ಲಿ ಘಟ್ಟದ ತಿರುವುಗಳು ಹೆಚ್ಚಿರುವುದರಿಂದ ಹೆದ್ದಾರಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಇಲ್ಲಿನ ವೆಂಕಟೇಶತೀರ್ಥ ತಿರುವು, ಮೊಸಳಗುಂಡಿ ಸೇತುವೆ ಹಾಗೂ ದೇವಿಮನೆ ಕಲ್ಲುಹೊಳೆ ಹತ್ತಿರದ ತಲಾ 100 ಮೀಟರ್ ವ್ಯಾಪ್ತಿಯಲ್ಲಿ ಮತ್ತು ಬಂಡಲ ಘಾಟ್ ಮುಂಗನ ರಸ್ತೆ ಕ್ರಾಸ್ ಹತ್ತಿರದ 50 ಮೀಟರ್ ಪ್ರದೇಶದಲ್ಲಿ ವಾಹನ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಜಿಲ್ಲಾಡಳಿತದ ಈ ಸುರಕ್ಷತಾ ನಿಯಮಗಳಿಗೆ ಕಡ್ಡಾಯವಾಗಿ ಸಹಕರಿಸಬೇಕೆಂದು ಸೂಚಿಸಲಾಗಿದೆ.
