ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

 ಬಂಧುಗಳಿದ್ದರೂ ಅಪರಿಚಿತರಿಂದಲೇ ಅಂತ್ಯಕ್ರಿಯೆ!

Pakka News Web • 8 ಸೆಪ್ಟೆಂ 2026,

ಕುಟುಂಬದ ಹಸಿವು ನೀಗಿಸಲು ಬದುಕಿನುದ್ದಕ್ಕೂ ಭಿಕ್ಷೆ ಬೇಡಿದಾತನಿಗೆ, ಕೊನೆಯ ಕ್ಷಣದಲ್ಲಿ ಒಂದು ಹನಿ ಪ್ರೀತಿಯೂ ಸಿಗಲಿಲ್ಲ. ಹೆಣವಾಗಿ ಆಸ್ಪತ್ರೆಯ ಶವಾಗಾರ ಸೇರಿದ ಬಳಿಕವೂ ಸ್ವಂತ ಕುಟುಂಬದವರು ಬರಲಿಲ್ಲ. ಎಂಟು ದಿನಗಳ ಕಾಲ ತನ್ನವರಿಗಾಗಿ ಕಾದ ಆ ಅನಾಥ ಜೀವಕ್ಕೆ ಕೊನೆಗೆ ಅಪರಿಚಿತರೇ ಬಂಧುಗಳಾದರು. ಭಟ್ಕಳದಲ್ಲಿ ನಡೆದ ಈ ಮನಕಲಕುವ ಘಟನೆ ರಕ್ತಸಂಬಂಧಗಳಿಗಿಂತ ಮಾನವೀಯತೆ ದೊಡ್ಡದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದೆ.

ಆಂಧ್ರಪ್ರದೇಶದ ವೆಲಗೂಡು ಕುಮಾಲ ಮೂಲದ 56 ವರ್ಷದ ದೊದೆಕೊಲಾ ಬುಕಾರಿ ಎರಡೂ ಕೈಕಾಲುಗಳ ಸ್ವಾಧೀನ ಕಳೆದುಕೊಂಡು ವ್ಹೀಲ್‌ಚೇರ್‌ನಲ್ಲೇ ಜೀವನ ಸಾಗಿಸುತ್ತಿದ್ದರು. ಭಟ್ಕಳ ನಗರ ಹಾಗೂ ರೈಲು ನಿಲ್ದಾಣದ ಸುತ್ತಮುತ್ತ ಭಿಕ್ಷಾಟನೆ ಮಾಡುತ್ತಿದ್ದ ಅವರು, ಜನರು ನೀಡುತ್ತಿದ್ದ ಹಣ ಮತ್ತು ಸರ್ಕಾರದಿಂದ ಸಿಗುತ್ತಿದ್ದ ಅಂಗವಿಕಲ ಮಾಸಾಶನವನ್ನು ತಮ್ಮ ಕುಟುಂಬದವರಿಗಾಗಿ ಆಂಧ್ರಪ್ರದೇಶಕ್ಕೆ ಕಳುಹಿಸುತ್ತಿದ್ದರು. ತಾವು ಕಷ್ಟಪಟ್ಟರೂ ಪರವಾಗಿಲ್ಲ, ತಮ್ಮ ಕುಟುಂಬ ನೆಮ್ಮದಿಯಿಂದಿರಬೇಕು ಎಂಬುದೇ ಅವರ ಬದುಕಿನ ಆಶಯವಾಗಿತ್ತು.

ಆದರೆ, ಬದುಕಿನ ಕೊನೆಯ ದಿನಗಳಲ್ಲಿ ಅವರ ಸ್ಥಿತಿ ಮಾತ್ರ ಯಾರನ್ನೂ ಕಣ್ಣೀರಾಗಿಸುವಂತಿತ್ತು. ಬಲಗೈ ಕೊಳೆತು ಹೋಗಿತ್ತು. ಹೊಟ್ಟೆಯ ಭಾಗದಲ್ಲಿ ಗಾಯಗಳಾಗಿದ್ದವು. ತೀವ್ರ ನೋವಿನ ನಡುವೆಯೂ ರೈಲು ನಿಲ್ದಾಣದ ಪಕ್ಕದ ಅಂಗಡಿ ಕಟ್ಟೆಯ ಮೇಲೆ ಅಸಹಾಯಕವಾಗಿ ನರಳುತ್ತಿದ್ದರು. ಈ ದೃಶ್ಯ ಕಂಡ ಸ್ಥಳೀಯ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ಸ್ಥಳೀಯರ ನೆರವಿನಿಂದ ಬುಕಾರಿಯವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

ಇಲ್ಲಿಂದಲೇ ಅವರ ಸಾವಿನ ನಂತರದ ನೋವಿನ ಕಥೆ ಮತ್ತಷ್ಟು ಕರುಣಾಜನಕವಾಯಿತು. ಪೊಲೀಸರು ಆಂಧ್ರಪ್ರದೇಶದಲ್ಲಿದ್ದ ಪತ್ನಿ ಮತ್ತು ಮಗನಿಗೆ ವಿಷಯ ತಿಳಿಸಿದರು. ‘ಇಂದು ಬರುತ್ತೇವೆ, ನಾಳೆ ಬರುತ್ತೇವೆ’ಎಂಬ ಉತ್ತರವೇ ಬರುತ್ತಿತ್ತು. ಆದರೆ ದಿನಗಳು ಉರುಳಿದವು. ಒಂದಲ್ಲ, ಎರಡಲ್ಲ.. ಬರೋಬ್ಬರಿ ಎಂಟು ದಿನ ಕಳೆದರೂ ಸ್ವಂತ ಕುಟುಂಬದವರು ಭಟ್ಕಳಕ್ಕೆ ಬರಲಿಲ್ಲ.

 ಈ ಅಮಾನವೀಯ ಸ್ಥಿತಿ ಕಂಡ ಮಂಜು ನಾಯ್ಕ ಮುಟ್ಟಳ್ಳಿ ಅವರು ಮತ್ತಷ್ಟು ಕಾಯದೆ ಪೊಲೀಸರಿಗೆ ಕಾನೂನುಬದ್ಧ ಮಾಹಿತಿ ನೀಡಿ, ಅಂತ್ಯಕ್ರಿಯೆಯ ಜವಾಬ್ದಾರಿ ವಹಿಸಿಕೊಂಡರು. ಸಮಾಜ ಸೇವಕರಾದ ಲಕ್ಷ್ಮೀಶ ನಾಯ್ಕ, ಮೋಹನ್ ದೇವಾಡಿಗ, ಅಂಬುಲೆನ್ಸ್ ಚಾಲಕ ಮಾರುತಿ ನಾಯ್ಕ ಹಾಗೂ ಪುರಸಭೆಯ ಪೌರಕಾರ್ಮಿಕರ ಸಹಕಾರದೊಂದಿಗೆ ಬುಕಾರಿಯವರಿಗೆ ಗೌರವಯುತ ಅಂತ್ಯಕ್ರಿಯೆ ನೆರವೇರಿಸಿದರು.

ಜೀವಂತವಾಗಿದ್ದಾಗ ಕುಟುಂಬದ ಪಾಲಿಗೆ ಹಣ ಕಳುಹಿಸಿದ ಕೈಗಳು, ಕೊನೆಗೆ ಯಾರೊಬ್ಬರ ಹೆಗಲನ್ನೂ ಕಾಣದೆ ಮಣ್ಣಿನಲ್ಲಿ ಮಲಗಿದವು. ರಕ್ತಸಂಬಂಧವಿಲ್ಲದ ಕೆಲವರು ಅಂತಿಮ ಕ್ಷಣದಲ್ಲಿ ಅವರ ಪಾಲಿಗೆ ಬಂಧುಗಳಾದರು. ಭಟ್ಕಳದಲ್ಲಿ ನಡೆದ ಈ ಘಟನೆ, ‘ಸ್ವಂತವರು’ಎನ್ನುವ ಸಂಬಂಧಕ್ಕಿಂತ ಸಂಕಷ್ಟದಲ್ಲಿರುವ ಜೀವದ ನೋವನ್ನು ಅರ್ಥಮಾಡಿಕೊಳ್ಳುವ ಮಾನವೀಯತೆಯೇ ನಿಜವಾದ ಬಂಧುತ್ವ ಎಂಬ ಕಹಿ ಸತ್ಯವನ್ನು ಸಮಾಜದ ಮುಂದೆ ನಿಲ್ಲಿಸಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250