ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಚೀನಾದಲ್ಲಿ ಮಿಂಚಿದ ಹಳ್ಳಿ ಹುಡುಗ!

Pakka News Web • 11 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದ ಪ್ರತಿಭಾವಂತ ಅಥ್ಲೀಟ್ ಶಿವಾಜಿ ಪರಶುರಾಮ ಮಾದಪ್ಪಗೌಡ ಅವರು ಚೀನಾದಲ್ಲಿ ನಡೆಯುತ್ತಿರುವ ಯು-23 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 5,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಭಾರತ, ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ಎತ್ತರಕ್ಕೇರಿಸಿದ್ದಾರೆ.

ಅತ್ಯಂತ ಪೈಪೋಟಿಯ ಸ್ಪರ್ಧೆಯಲ್ಲಿ ಶಿವಾಜಿ ಅವರು 14 ನಿಮಿಷ 08.19 ಸೆಕೆಂಡುಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು. ಜಪಾನ್‌ನ ರುಯಿ ಸುಜುಕಿ 14 ನಿಮಿಷ 01.24 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಭಾರತದ ಮತ್ತೋರ್ವ ಅಥ್ಲೀಟ್ ವಿನೋದ್ ಸಿಂಗ್ 14 ನಿಮಿಷ 23.67 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದರೊಂದಿಗೆ ಪುರುಷರ 5,000 ಮೀಟರ್ ವಿಭಾಗದಲ್ಲಿ ಭಾರತಕ್ಕೆ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಲಭಿಸಿತು.

ಸಾಧಾರಣ ಕುಟುಂಬದಿಂದ ಬಂದಿರುವ ಬೆಳವಟಗಿಯ ಶಿವಾಜಿ, ಬಾಲ್ಯದಿಂದಲೇ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಬೆಳೆಸಿಕೊಂಡು ನಿರಂತರ ಪರಿಶ್ರಮ, ಶಿಸ್ತು ಮತ್ತು ಕಠಿಣ ತರಬೇತಿಯ ಮೂಲಕ ಈ ಸಾಧನೆಯ ಶಿಖರ ತಲುಪಿದ್ದಾರೆ. ಇಂದು ಅವರ ಓಟ ಕೇವಲ ವೈಯಕ್ತಿಕ ಗೆಲುವಾಗಿಯೇ ಉಳಿದಿಲ್ಲ; ಭಾರತದ ತ್ರಿವರ್ಣ ಧ್ವಜವನ್ನು ಏಷ್ಯಾದ ವೇದಿಕೆಯಲ್ಲಿ ಹೆಮ್ಮೆಯಿಂದ ಹಾರಿಸಿದ ಕ್ಷಣವಾಗಿ ಇತಿಹಾಸದಲ್ಲಿ ದಾಖಲಾಗಿದೆ.

ಶಿವಾಜಿ ಅವರ ಈ ಸಾಧನೆಗೆ ಜಿಲ್ಲೆಯಾದ್ಯಂತ ಸಂಭ್ರಮ ಮನೆಮಾಡಿದ್ದು, ಕ್ರೀಡಾಭಿಮಾನಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ. ಭವಿಷ್ಯದಲ್ಲಿ ಒಲಿಂಪಿಕ್ಸ್ ಸೇರಿದಂತೆ ಇನ್ನಷ್ಟು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡಲಿ ಎಂಬ ಆಶಯ ವ್ಯಕ್ತವಾಗುತ್ತಿದೆ.

ಹಳಿಯಾಳದ ಮಣ್ಣಿನಿಂದ ಹೊರಹೊಮ್ಮಿದ ಈ ಯುವ ಪ್ರತಿಭೆಯ ಸಾಧನೆ ಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಹೊಸ ಕನಸು ಕಾಣುವ ಧೈರ್ಯ ನೀಡಿದ್ದು, ಕಠಿಣ ಪರಿಶ್ರಮ ಮತ್ತು ಗುರಿಯತ್ತ ಅಚಲ ನಿಷ್ಠೆ ಇದ್ದರೆ ವಿಶ್ವದ ಯಾವುದೇ ವೇದಿಕೆಯಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250