ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ನ್ಯಾಯಕ್ಕೆ ತಲೆಬಾಗಿದ ಕರವೇ!

Pakka News Web • 13 ಜುಲೈ 2026,

ದಾಂಡೇಲಿಯಲ್ಲಿ ಮಹಿಳಾ ವಕೀಲೆ ಜಯಾ ನಾಯ್ಕ ಅವರ ಕಚೇರಿಯ ನಾಮಫಲಕ ಕಿತ್ತು ಹಾಕಿದ ಪ್ರಕರಣದಲ್ಲಿ ಕೊನೆಗೂ ನ್ಯಾಯದ ಮುಂದೆ ತಪ್ಪಿತಸ್ಥರು ತಲೆಬಾಗಿದ ಘಟನೆ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದಾಂಡೇಲಿ ಘಟಕದ ಅಧ್ಯಕ್ಷ ಸಾದಿಕ್ ಮುಲ್ಲಾ ಹಾಗೂ ಇತರ ಮೂವರು ಸೇರಿ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಅವರ ಎದುರು ಕ್ಷಮೆಯಾಚಿಸಿದ್ದು, ರಾಜಿ ಸಂಧಾನದ ಮೂಲಕ ಪ್ರಕರಣಕ್ಕೆ ತೆರೆ ಬಿದ್ದಿದೆ.

ಈ ಪ್ರಕರಣವು 2024ರ ಜನವರಿ 2ರಂದು ದಾಂಡೇಲಿಯ ಜೆ.ಎನ್. ರಸ್ತೆಯಲ್ಲಿ ನಡೆದ ಘಟನೆಯಿಂದ ಆರಂಭವಾಗಿತ್ತು. ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸುವ ಅಭಿಯಾನ ನಡೆಸುತ್ತಿದ್ದ ವೇಳೆ, ಕನ್ನಡದಲ್ಲೇ ಇದ್ದ ವಕೀಲೆ ಜಯಾ ಡಿ. ನಾಯ್ಕ ಅವರ ಕಚೇರಿಯ ನಾಮಫಲಕವನ್ನೇ ಕರವೇ ಕಾರ್ಯಕರ್ತರು ಕಿತ್ತು ಹಾಕಿದ್ದರು. ಕನ್ನಡದ ಪರ ಹೋರಾಟ ನಡೆಸುವ ಸಂಘಟನೆಯೇ ಕನ್ನಡ ನಾಮಫಲಕವನ್ನು ಕಿತ್ತೆಸೆದಿರುವುದು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಘಟನೆ ನಡೆದ ವೇಳೆ ವಕೀಲೆ ಕಚೇರಿಯಲ್ಲಿ ಇರಲಿಲ್ಲ. ನಾಮಫಲಕ ಕಿತ್ತ ಸಂದರ್ಭದಲ್ಲಿ ನಗರಸಭೆಯ ಇಬ್ಬರು ಸಿಬ್ಬಂದಿಯೂ ಸ್ಥಳದಲ್ಲಿದ್ದರೆಂಬ ಆರೋಪ ಕೇಳಿಬಂದಿತ್ತು. ಬಳಿಕ ಜಯಾ ನಾಯ್ಕ ಅವರು ಪೊಲೀಸ್ ಠಾಣೆಗೆ ದೂರು ನೀಡಿದರೂ, ದೂರು ಸ್ವೀಕರಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ ಎನ್ನುವ ಆರೋಪವೂ ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿತ್ತು.

ಆದರೆ, ಹೋರಾಟ ಕೈಬಿಡದ ಜಯಾ ನಾಯ್ಕ ಅವರು ಘಟನೆಯ ವಿಡಿಯೊ ದಾಖಲೆಗಳೊಂದಿಗೆ ದಾಂಡೇಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಂದಿನ ನ್ಯಾಯಾಧೀಶೆ ರೋಹಿಣಿ ಬಸಾಪುರ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆದೇಶ ನೀಡಿದ್ದರು. ಆ ಬಳಿಕ ಸುಮಾರು ಎರಡೂವರೆ ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಪ್ರಕರಣವು ಕೊನೆಗೆ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ.

ಲೋಕ ಅದಾಲತ್‌ನಲ್ಲಿ ನ್ಯಾಯಾಲಯದ ಎದುರು ಸಾದಿಕ್ ಮುಲ್ಲಾ ಹಾಗೂ ಇತರ ಆರೋಪಿಗಳು ಕ್ಷಮೆಯಾಚಿಸಿದ ನಂತರ ಪ್ರಕರಣ ಮುಕ್ತಾಯಗೊಂಡಿದ್ದು, ನ್ಯಾಯದ ಮುಂದೆ ತಲೆಬಾಗಲೇಬೇಕಾಯಿತು ಎಂಬ ಸಂದೇಶ ಈ ಬೆಳವಣಿಗೆಯಿಂದ ಹೊರಬಂದಿದೆ. ದಾಂಡೇಲಿ ಲೋಕ ಅದಾಲತ್‌ನಲ್ಲಿ ಕರವೇ ಪದಾಧಿಕಾರಿಗಳು ನ್ಯಾಯಾಲಯದ ಎದುರು ಕ್ಷಮೆಯಾಚಿಸಿದ ಅಪರೂಪದ ಪ್ರಕರಣವಾಗಿ ಇದು ದಾಖಲಾಗಿದೆ.

ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ರಮೇಶ್ ಬಂಕಾಪುರ, ವಕೀಲ ರಾಘವೇಂದ್ರ ಗಡೆಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250