ಜೈಲಿನೊಳಗೆ ನಿಷೇಧಿತ ತಂಬಾಕು ಸಾಗಿಸಲು ಕೊಬ್ಬರಿ ಎಣ್ಣೆ ಡಬ್ಬವನ್ನು ಬಳಸಿದ ಪ್ರಕರಣ ಹಳಿಯಾಳ ತಾಲೂಕು ಉಪ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ವಿಚಾರಣಾ ಬಂದಿಯನ್ನು ಭೇಟಿಯಾಗಲು ಬಂದಿದ್ದ ತಾಯಿ, ಕೊಬ್ಬರಿ ಎಣ್ಣೆ ಡಬ್ಬದೊಳಗೆ ತಂಬಾಕು ಅಡಗಿಸಿಟ್ಟು ನೀಡಲು ಯತ್ನಿಸಿದ ಆರೋಪದಡಿ ತಾಯಿ ಹಾಗೂ ಮಗನ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 14ರಂದು ಮಧ್ಯಾಹ್ನ ಕಾರಾಗೃಹದಲ್ಲಿ ಸಂದರ್ಶಕರ ಭೇಟಿಯ ವೇಳೆ ಈ ಘಟನೆ ನಡೆದಿದೆ. ಆ ದಿನ ಇ-ಪ್ರಿಸನ್ಸ್ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ, ನಿಯಮಾನುಸಾರ ಸಂದರ್ಶಕರ ವಿವರಗಳನ್ನು ದಾಖಲಿಸಿಕೊಂಡು ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇದೇ ವೇಳೆ ವಿಚಾರಣಾ ಬಂದಿಯಾಗಿರುವ ಶ್ರೀಕಾಂತ್ ರಾಜಶೇಖರ ಕಿರಣ್‌ನವರ್ ಅವರನ್ನು ಭೇಟಿಯಾಗಲು ಅವರ ತಾಯಿ ಆಗಮಿಸಿದ್ದರು. ಭೇಟಿಯ ಸಂದರ್ಭದಲ್ಲಿ ಬೇಕರಿ ತಿನಿಸುಗಳೊಂದಿಗೆ ತಂದಿದ್ದ ಸಾಮಗ್ರಿಗಳನ್ನು ಮಗನಿಗೆ ನೀಡಿದ್ದರು.
ಸಂದರ್ಶನದ ಬಳಿಕ ಜೈಲು ಸಿಬ್ಬಂದಿ ನಿಯಮಿತ ತಪಾಸಣೆ ನಡೆಸಿದಾಗ, ತಿನಿಸುಗಳ ಜೊತೆಗಿದ್ದ ‘ಡಾಬರ್ ಅನ್ಮೋಲ್ ಗೋಲ್ಡ್’ ಕೊಬ್ಬರಿ ಎಣ್ಣೆ ಡಬ್ಬದ ಮೇಲೆ ಅನುಮಾನ ವ್ಯಕ್ತವಾಯಿತು. ಡಬ್ಬವನ್ನು ಪರಿಶೀಲಿಸಿದಾಗ ಅದರೊಳಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುಮಾರು 20ರಿಂದ 25 ಗ್ರಾಂ ತೂಕದ ನಿಷೇಧಿತ ತಂಬಾಕು ಅಡಗಿಸಿಟ್ಟಿರುವುದು ಪತ್ತೆಯಾಯಿತು.
ಕಾರಾಗೃಹದೊಳಗೆ ನಿಷೇಧಿತ ವಸ್ತು ಸಾಗಿಸಲು ಯತ್ನಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಉಪ ಕಾರಾಗೃಹದ ಅಧೀಕ್ಷಕ ರಾಜಕುಮಾರ ದೊಡ್ಡಮನಿ ಅವರು ಹಳಿಯಾಳ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದರು. ದೂರಿನ ಆಧಾರದ ಮೇಲೆ ತಾಯಿ ಹಾಗೂ ವಿಚಾರಣಾ ಬಂದಿ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜೈಲಿನ ಭದ್ರತಾ ಸಿಬ್ಬಂದಿಯ ಎಚ್ಚರಿಕೆಯಿಂದ ನಿಷೇಧಿತ ವಸ್ತು ಕಾರಾಗೃಹದೊಳಗೆ ಸಾಗುವ ಯತ್ನ ವಿಫಲವಾಗಿದ್ದು, ಪ್ರಕರಣದ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
