ಜಿಲ್ಲಾ ಕೇಂದ್ರ ಕಾರವಾರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಬೈಕ್ ರೆಂಟಲ್ ದಂಧೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಸ್ಥಳೀಯ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ಗಂಭೀರ ಹೊಡೆತ ನೀಡುತ್ತಿದೆ. ಯಾವುದೇ ಕಾನೂನುಬದ್ಧ ಅನುಮತಿ ಹಾಗೂ ಸಾರಿಗೆ ಇಲಾಖೆಯ ಪರವಾನಗಿ ಇಲ್ಲದೆ ಗೋಕರ್ಣ ಮೂಲದ ದ್ವಿಚಕ್ರ ವಾಹನಗಳನ್ನು ಕಾರವಾರಕ್ಕೆ ತಂದು ಬಾಡಿಗೆಗೆ ನೀಡುತ್ತಿರುವ ಜಾಲವೊಂದು ಬಹಿರಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ನಗರದ ಸವಿತಾ ಹೋಟೆಲ್ ಸಮೀಪ, ಕೆ.ಇ.ಬಿ. ರಸ್ತೆ, ಮದಿನಾ ಜಾಮಿಯಾ ಮಸೀದಿ ಹತ್ತಿರ, ಕೋಡಿಬಾಗದ ಅಳ್ವೆವಾಡ ಹಾಗೂ ಚೆಂಡಿಯಾ ಪೋಸ್ಟ್ ವ್ಯಾಪ್ತಿಯಲ್ಲಿ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ. ಗೋಕರ್ಣದಲ್ಲಿರುವ ಮೂಲ ಏಜೆನ್ಸಿಗಳು ಸ್ಥಳೀಯ ಸಂಪರ್ಕಗಳ ಮೂಲಕ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಬೈಕ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದ್ದು, ಸಾರಿಗೆ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ಈ ಅನಧಿಕೃತ ವ್ಯವಹಾರದಿಂದ ಕಡಿಮೆ ದರದಲ್ಲಿ ಬೈಕ್‌ಗಳು ಲಭ್ಯವಾಗುತ್ತಿರುವ ಪರಿಣಾಮ, ಕಾನೂನುಬದ್ಧವಾಗಿ ಪರವಾನಗಿ ಪಡೆದು ತೆರಿಗೆ ಪಾವತಿಸುತ್ತಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿದ್ದಾರೆ. ವಾಹನ ಸಾಲದ ಕಂತು, ವಿಮೆ, ತೆರಿಗೆ ಸೇರಿದಂತೆ ಎಲ್ಲ ನಿಯಮಗಳನ್ನು ಪಾಲಿಸಿ ದುಡಿಯುತ್ತಿರುವ ಸಾವಿರಾರು ಸಾರಿಗೆ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರು ಈ ದಂಧೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಬೈಕ್ ರೆಂಟಲ್ ಕೇಂದ್ರಗಳ ಮೇಲೆ ದಾಳಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ದಂಧೆಯ ಹಿಂದಿರುವ ಮೂಲ ಏಜೆನ್ಸಿಗಳು ಹಾಗೂ ವಾಹನ ಮಾಲೀಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜಸೇವಕ ಹಾಗೂ ಟ್ಯಾಕ್ಸಿ ಚಾಲಕ-ಮಾಲೀಕ ರಾಹುಲ ನಾಯ್ಕ, ಅನಧಿಕೃತ ಬೈಕ್ ರೆಂಟಲ್ ದಂಧೆ ಕಾರವಾರದಲ್ಲಿ ನಿಯಂತ್ರಣ ತಪ್ಪುತ್ತಿದೆ. ಇದರಿಂದ ಸ್ಥಳೀಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಆದಾಯ ಕುಸಿದಿದ್ದು, ಕುಟುಂಬ ನಿರ್ವಹಣೆಯೇ ಕಷ್ಟಕರವಾಗಿದೆ. ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಅಕ್ರಮ ದಂಧೆಗೆ ಕಡಿವಾಣ ಹಾಕಿ, ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಆರೋಪಗಳ ಕುರಿತು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿವೆ ಎಂಬುದು ಈಗ ಸ್ಥಳೀಯರ ಮತ್ತು ಸಾರಿಗೆ ವಲಯದ ಪ್ರಮುಖ ನಿರೀಕ್ಷೆಯಾಗಿದೆ.
