ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Trending

ಉತ್ತರ ಕನ್ನಡ ಪೊಲೀಸ್ ಪಡೆಯಲ್ಲಿ ನವಚೈತನ್ಯ: ಇವರೇ ಕಾಪ್ ಆಫ್ ದಿ ಮಂತ್!

Pakka News Web • 9 ಆಗಸ್ಟ್ 2026,

ಅಹೋರಾತ್ರಿ ಸಾರ್ವಜನಿಕರ ರಕ್ಷಣೆಯಲ್ಲಿ ನಿರತರಾಗುವ ಪೊಲೀಸ್ ಸಿಬ್ಬಂದಿಯ ನಿಷ್ಠೆ, ಶ್ರಮ ಮತ್ತು ಬದ್ಧತೆಯನ್ನು ಗುರುತಿಸಿ ಗೌರವಿಸುವುದು ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. 

ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ. ಎನ್. ಅವರು ಸಿಬ್ಬಂದಿಯಲ್ಲಿ ಉತ್ಸಾಹ ತುಂಬಲು ಮತ್ತು ಕರ್ತವ್ಯ ಪ್ರಜ್ಞೆಯನ್ನು ಹೆಚ್ಚಿಸಲು ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. 

ಅದರಂತೆ ಜುಲೈ ತಿಂಗಳಿನಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ವಿಭಾಗಗಳ ಒಟ್ಟು 23 ಪೊಲೀಸ್ ಸಿಬ್ಬಂದಿಯನ್ನು ‘ಕಾಪ್ ಆಫ್ ದಿ ಮಂತ್’ ಗೌರವಕ್ಕೆ ಆಯ್ಕೆ ಮಾಡುವ ಮೂಲಕ ಎಸ್‌ಪಿ ದೀಪನ್ ಎಂ.ಎನ್. ಅವರು ಕೆಳಹಂತದ ಸಿಬ್ಬಂದಿಗೂ ಸೂಕ್ತ ಪ್ರೋತ್ಸಾಹ ಹಾಗೂ ಮನ್ನಣೆ ನೀಡುವ ವಿಶಿಷ್ಟ ಪರಂಪರೆಗೆ ಚಾಲನೆ ನೀಡಿದ್ದಾರೆ.

ಕೇವಲ ಅಪರಾಧ ತನಿಖೆಯಷ್ಟೇ ಅಲ್ಲದೆ, ಆರೋಪಿಗಳ ಶೀಘ್ರ ಪತ್ತೆ, ಬಂದೋಬಸ್ತ್ ನಿರ್ವಹಣೆ, ಸಂಚಾರ ನಿಯಂತ್ರಣ, ರಾತ್ರಿ ಗಸ್ತು ಹಾಗೂ ತುರ್ತು ಸೇವೆಗಳಲ್ಲಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿ ಈ ಗೌರವಕ್ಕೆ ಪಾತ್ರರನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಪೊಲೀಸ್ ಪಡೆಯಲ್ಲಿ ಆರೋಗ್ಯಕರ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಕೆಳಹಂತದ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಹೋಮ್ ಗಾರ್ಡ್‌ಗಳವರೆಗೂ ಹೊಸ ಹುಮ್ಮಸ್ಸು ಮೂಡಿದೆ.

ಈ ಪ್ರೋತ್ಸಾಹಕ ಯೋಜನೆಯು ಜಿಲ್ಲೆಯ ಎಲ್ಲಾ ಉಪವಿಭಾಗಗಳಿಗೂ ತಲುಪಿದ್ದು, ಪ್ರತಿಯೊಂದು ಭಾಗದ ಅತ್ಯುತ್ತಮ ಕೆಲಸವನ್ನು ಗುರುತಿಸಲಾಗಿದೆ. 

ಕಾರವಾರ ಉಪವಿಭಾಗದಲ್ಲಿ ಕಾರವಾರ ನಗರ ಠಾಣೆಯ ಎಎಸ್‌ಐ ರುದ್ರೇಶ ಮೇತ್ರಣಿ ಹಾಗೂ ಹೋಮ್ ಗಾರ್ಡ್ ಅಶೋಕ ತಳೇಕರ, ಕಾರವಾರ ಗ್ರಾಮೀಣ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿವೇಕಾನಂದ ಪಟಗಾರ ಮತ್ತು ಸಿಪಿಸಿ ಹನುಮಂತ ಎಂ. ಸರಿಕರ ಅವರು ತಮ್ಮ ಗಮನಾರ್ಹ ಸೇವೆಯಿಂದ ಈ ಗೌರವಕ್ಕೆ ಭಾಜನರಾಗಿದ್ದಾರೆ. ಭಟ್ಕಳ ಉಪವಿಭಾಗದಲ್ಲಿ ಮಂಕಿ ಠಾಣೆಯ ಎಎಸ್‌ಐ ಪರಮೇಶ್ವರ ಮಾಳ್ಸೇಕರ, ಗೋಕರ್ಣದ ಹೆಡ್ ಕಾನ್‌ಸ್ಟೆಬಲ್ ಗೋರಕನಾಥ ರಾಣೆ, ಭಟ್ಕಳ ಗ್ರಾಮೀಣದ ಸಿಪಿಸಿ ವಿನೋದ ರೆಡ್ಡಿ ಹಾಗೂ ಭಟ್ಕಳ ಶಹರದ ಹೋಮ್ ಗಾರ್ಡ್ ರವೀಂದ್ರ ನಾಯ್ಕ ಅವರು ಈ ಸಾಲಿನಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಅದೇ ರೀತಿ ಶಿರಸಿ ಉಪವಿಭಾಗದಲ್ಲಿ ಮುಂಡಗೋಡಿನ ಎಎಸ್‌ಐ ಸೋಮಶೇಖರ ಮೇತ್ರಿ, ಶಿರಸಿ ಗ್ರಾಮೀಣದ ಹೆಡ್ ಕಾನ್‌ಸ್ಟೆಬಲ್ ಗಣಪತಿ ಪಟಗಾರ, ಯಲ್ಲಾಪುರದ ಸಿಪಿಸಿ ಮಹಾವೀರ ಡಿ.ಎಸ್. ಹಾಗೂ ಬನವಾಸಿಯ ಹೋಮ್ ಗಾರ್ಡ್ ಶಂಕರ ಮೂರ್ತಿ ನಾಯ್ಕ ಅವರು ತಮ್ಮ ಕೆಲಸದ ಬದ್ಧತೆಯಿಂದ ಈ ಗೌರವ ಪಡೆದಿದ್ದರೆ, ದಾಂಡೇಲಿ ಉಪವಿಭಾಗದಿಂದ ದಾಂಡೇಲಿ ಗ್ರಾಮೀಣದ ಎಎಸ್‌ಐ ಸಂತ್ರಾಮ ಕಾಂಬಳೆ, ರಾಮನಗರದ ಹೆಡ್ ಕಾನ್‌ಸ್ಟೆಬಲ್ ನಾಮದೇವ ಕಂಕಾಳಿ, ಸಿಪಿಸಿ ಸುರೇಶ ಗಜಬರ ಹಾಗೂ ಹಳಿಯಾಳದ ಹೋಮ್ ಗಾರ್ಡ್ ಬಾಲಕೃಷ್ಣ ಮುಖಾಶಿ ಅವರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಕೇವಲ ಕಾನೂನು ಸುವ್ಯವಸ್ಥೆ ಠಾಣೆಗಳಷ್ಟೇ ಅಲ್ಲದೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಹಾಗೂ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ‘ERSS-112’ ತುರ್ತು ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸೇವೆಯನ್ನೂ ಎಸ್‌ಪಿ ದೀಪನ್ ಎಂ.ಎನ್. ಅವರು ಮರೆತಿಲ್ಲ.

ಡಿಎಆರ್ ವಿಭಾಗದ ಎಆರ್‌ಎಸ್‌ಐ ವಿನೋದ ಬಾಂದೇಕರ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಸಂಜೀವ ನಾಯ್ಕ, ಗೋಪಾಲಕೃಷ್ಣ ನಾಯಕ ಹಾಗೂ ಎಪಿಸಿ ಅಮಜ್ದಾಖಾನ ಖಾಜಿ ಅವರು ಈ ಗೌರವ ಪಡೆದಿದ್ದರೆ, ಸಾರ್ವಜನಿಕರ ಆಪತ್ಕಾಲಕ್ಕೆ ತಕ್ಷಣ ಸ್ಪಂದಿಸುವ ERSS-112 ವಿಭಾಗದ ಸಿಎಚ್‌ಸಿ ಸಚಿನ್ ನಾಯಕ, ಎಚ್‌ಸಿ ರಫೀಕ ಹಿರೇಮನಿ ಹಾಗೂ ಎಪಿಸಿ ವಿಘ್ನೇಶ ತಾಂಡೇಲ ಅವರು ಜುಲೈ ತಿಂಗಳ ಅತ್ಯುತ್ತಮ ಸಿಬ್ಬಂದಿಯಾಗಿ ಹೊರಹೊಮ್ಮಿದ್ದಾರೆ.

ಎಸ್‌ಪಿ ದೀಪನ್ ಎಂ. ಎನ್. ಅವರ ಈ ಮಾದರಿ ಕ್ರಮವು ಜಿಲ್ಲಾ ಪೊಲೀಸ್ ವಲಯದಲ್ಲಿ ಅತ್ಯಂತ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ. ಸಂಸ್ಥೆಯಲ್ಲಿ ದುಡಿಯುವ ಕೊನೆಯ ಹಂತದ ನೌಕರನ ಶ್ರಮವನ್ನೂ ಗುರುತಿಸಿ ಅಭಿನಂದಿಸುವ ಇಂತಹ ಪ್ರೋತ್ಸಾಹದಾಯಕ ಕ್ರಮಗಳು, ಇಡೀ ಪಡೆಯನ್ನು ಮತ್ತಷ್ಟು ದಕ್ಷತೆಯಿಂದ ಹಾಗೂ ಜನಸ್ನೇಹಿಯಾಗಿ ಕೆಲಸ ಮಾಡಲು ಪ್ರೇರೇಪಿಸುತ್ತಿವೆ ಎಂಬುದು ಸಾರ್ವಜನಿಕ ಹಾಗೂ ಪೊಲೀಸ್ ವಲಯದಲ್ಲಿ ವ್ಯಕ್ತವಾಗುತ್ತಿರುವ ಮೆಚ್ಚುಗೆಯ ನುಡಿಯಾಗಿದೆ.

.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250