ಎರಡು ವರ್ಷಗಳಿಂದ ಸಾಮಾಜಿಕ ಬಹಿಷ್ಕಾರ ಹಾಗೂ ಕಿರುಕುಳದಿಂದ ನಲುಗಿರುವ ಹೊನ್ನಾವರ ತಾಲೂಕಿನ ಸರಳಗಿ ಗ್ರಾಮದ ಎಂಟು ಕುಟುಂಬಗಳು ಇದೀಗ ನ್ಯಾಯಕ್ಕಾಗಿ ಕೊನೆಯ ಮೊರೆ ಎಂಬಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮೆಟ್ಟಿಲೇರಿವೆ.
ನಮಗೆ ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಿ ನ್ಯಾಯ ಕೊಡಿಸಿ, ಇಲ್ಲವಾದರೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಸಂತ್ರಸ್ತರು ಕಣ್ಣೀರಿನ ಮನವಿಯೊಂದಿಗೆ ಆಗ್ರಹಿಸಿದ್ದಾರೆ.
ಉಪ್ಪೋಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಳಗಿ ಗ್ರಾಮದ ಉಪ್ಪಾರ ಸಮಾಜದ ಕುಟುಂಬಗಳು, ಗ್ರಾಮದಲ್ಲಿನ ಕೆಲವರಿಂದ ನಿರಂತರವಾಗಿ ಸಾಮಾಜಿಕ ಬಹಿಷ್ಕಾರ ಹಾಗೂ ಕಿರುಕುಳ ಎದುರಿಸುತ್ತಿರುವುದಾಗಿ ಆರೋಪಿಸಿವೆ. ದೇವಸ್ಥಾನಕ್ಕೆ ತೆರಳುವ ದಾರಿಗೆ ಮುಳ್ಳುಬೇಲಿ ಹಾಕುವುದು, ತಮ್ಮ ಆಟೋರಿಕ್ಷಾಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ದಂಡ ವಿಧಿಸುವುದು, ತಮ್ಮೊಂದಿಗೆ ಮಾತನಾಡಿದವರನ್ನೂ ಬಹಿಷ್ಕರಿಸುವುದಾಗಿ ಬೆದರಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ನೀಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಇಷ್ಟೇ ಅಲ್ಲದೆ, ಕ್ಷುಲ್ಲಕ ವಿಚಾರಗಳಿಗೂ ಜಗಳ ತೆಗೆದು ಹಲ್ಲೆ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಹಿಷ್ಕಾರದ ಪರಿಣಾಮ ಮಕ್ಕಳ ಮೇಲೂ ಬಿದ್ದಿದ್ದು, ಗ್ರಾಮದಲ್ಲೇ ಶಾಲೆ ಇದ್ದರೂ ತಮ್ಮ ಮಕ್ಕಳನ್ನು ಸುಮಾರು ಎಂಟು ಕಿಲೋಮೀಟರ್ ದೂರದ ಶಾಲೆಗೆ ಕಳುಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಟುಂಬಗಳು ತಮ್ಮ ಅಳಲು ತೋಡಿಕೊಂಡಿವೆ.
ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ನೊಂದ ಕುಟುಂಬಗಳು ಜನಶಕ್ತಿ ವೇದಿಕೆಯ ಬೆಂಬಲದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿವೆ. ವಿಷಯದ ಗಂಭೀರತೆಯನ್ನು ಪರಿಗಣಿಸಿದ ಎಸ್ಪಿ, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಭಟ್ಕಳ ಡಿವೈಎಸ್ಪಿಗೆ ನಿರ್ದೇಶನ ನೀಡಿದ್ದಾರೆ.
ಚಂದ್ರಕಾಂತ್ ಉಪ್ಪಾರ್, ಗಜಾನನ ಉಪ್ಪಾರ್, ಚಿತ್ರಾಂಗ ಉಪ್ಪಾರ್, ಮಾರುತಿ ಉಪ್ಪಾರ್, ನಯನ ಬಿ. ಉಪ್ಪಾರ್, ಲೀಲಾ ಉಪ್ಪಾರ್ ಸೇರಿದಂತೆ ಸಂತ್ರಸ್ತ ಕುಟುಂಬಗಳ ಸದಸ್ಯರು ಹಾಗೂ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ನಾಯಕ್ ಈ ವೇಳೆ ಉಪಸ್ಥಿತರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ಮನವಿಯ ಪ್ರತಿಯನ್ನು ರವಾನಿಸಲಾಗಿದೆ.
ಎರಡು ವರ್ಷಗಳಿಂದ ಮುಂದುವರಿದಿರುವ ಈ ಸಾಮಾಜಿಕ ಬಹಿಷ್ಕಾರದ ಆರೋಪಗಳಿಗೆ ಇದೀಗ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
