ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Crime

ಹೊಟ್ಟೆಪಾಡಿಗಾಗಿ ಬಂದವ ಹೆಣವಾಗಿ ಮರಳಿದ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾ*ವು

Pakka News Web • 22 ಆಗಸ್ಟ್ 2026,

ಹೊಟ್ಟೆಪಾಡಿಗಾಗಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದಿದ್ದ ಯುವ ಕಾರ್ಮಿಕನ ಬದುಕು ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಕಟ್ಟಡದ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ 26 ವರ್ಷದ ಕಾರ್ಮಿಕ ಮೃತಪಟ್ಟ ಹೃದಯವಿದ್ರಾವಕ ಘಟನೆ ಶನಿವಾರ ಮುಂಡಗೋಡದ ಟಿಬೆಟಿಕಾಲೋನಿಯ ಕ್ಯಾಂಪ್ ನಂಬರ್ 1ರಲ್ಲಿ ನಡೆದಿದೆ.

ಮೃತನನ್ನು ಮುಂಡಗೋಡ ತಾಲೂಕಿನ ಇಂದಿರಾನಗರ ಕೊಪ್ಪದ, ಮೂಲತಃ ಬಸಾಪುರದ ನಿವಾಸಿ ಸಂಜು ಅಲಿಯಾಸ್ ಸಂದೇಶ ನಾಗರಾಜ ಚಲವಾದಿ ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡು ಕುಟುಂಬವನ್ನು ಸಾಕುತ್ತಿದ್ದ ಸಂಜು ವಿವಾಹಿತರಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದರು ಎನ್ನಲಾಗಿದೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಯುವಕನ ಅಕಾಲಿಕ ಸಾವು ಇದೀಗ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ದಿಕ್ಕುತೋಚದ ಸ್ಥಿತಿಗೆ ತಳ್ಳಿದೆ.

ಪ್ರತಿದಿನದಂತೆ ಕೆಲಸಕ್ಕೆ ತೆರಳಿದ್ದ ಸಂಜು, ಕಟ್ಟಡದ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ರಕ್ಷಿಸುವ ಪ್ರಯತ್ನ ನಡೆದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೊಟ್ಟೆಪಾಡಿಗಾಗಿ ದುಡಿದು ಕುಟುಂಬದ ಭವಿಷ್ಯ ಕಟ್ಟಬೇಕಿದ್ದ ಯುವಕನೇ ಕಟ್ಟಡದಿಂದ ಬಿದ್ದು ಜೀವ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ತೀವ್ರ ನೋವು ಮೂಡಿಸಿದೆ.

ಟಿಬೆಟಿಕಾಲೋನಿಯಲ್ಲೇ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಮೃತಪಟ್ಟಿರುವುದು ಇತ್ತೀಚಿನ ಅವಧಿಯಲ್ಲಿ ಎರಡನೇ ಘಟನೆ ಎನ್ನಲಾಗುತ್ತಿದೆ. ಒಂದೇ ರೀತಿಯ ದುರ್ಘಟನೆಗಳು ಮರುಕಳಿಸುತ್ತಿರುವುದು ಕಟ್ಟಡ ಕಾಮಗಾರಿಗಳಲ್ಲಿ ಕಾರ್ಮಿಕರ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಿಗೆ ಸುರಕ್ಷತಾ ಹೆಲ್ಮೆಟ್, ಸುರಕ್ಷತಾ ಬೆಲ್ಟ್, ಜಾಲ ಸೇರಿದಂತೆ ಅಗತ್ಯ ರಕ್ಷಣಾ ಪರಿಕರಗಳನ್ನು ಕಡ್ಡಾಯವಾಗಿ ಒದಗಿಸಬೇಕಿದೆ. ಆದರೆ ಈ ನಿಯಮಗಳ ಪಾಲನೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಇನ್ನೊಂದು ಕುಟುಂಬ ಇದೇ ರೀತಿಯ ದುರಂತಕ್ಕೆ ಬಲಿಯಾಗುವ ಮುನ್ನ ಟಿಬೆಟಿಕಾಲೋನಿಯಲ್ಲಿನ ಕಟ್ಟಡ ಕಾಮಗಾರಿಗಳ ಸುರಕ್ಷತಾ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಪರಿಶೀಲಿಸಬೇಕು. ಕಾರ್ಮಿಕನ ಜೀವಕ್ಕೆ ಬೆಲೆ ನೀಡುವಂತಹ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಹೊಟ್ಟೆಪಾಡಿಗಾಗಿ ದುಡಿದು ಮನೆಗೆ ಆಧಾರವಾಗಿದ್ದ ಸಂಜು ಇದೀಗ ಮರಳಿ ಬಾರದ ಲೋಕಕ್ಕೆ ತೆರಳಿದ್ದು, ಇಬ್ಬರು ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಬದುಕಿನ ಮೇಲೆ ಅವರ ಸಾವಿನ ನೆರಳು ಆವರಿಸಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250