ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Crime

ಏಣಿ ತಾಗಿತು ವಿದ್ಯುತ್ ತಂತಿಗೆ; ಕೃಷಿಕ ಸಾ*ವು

Pakka News Web • 24 ಆಗಸ್ಟ್ 2026,

ಅಡಿಕೆ ಕೊಯ್ಯಲು ತೋಟಕ್ಕೆ ತೆರಳಿದ್ದ ಕೃಷಿಕರೊಬ್ಬರು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿರುವ ದಾರುಣ ಘಟನೆ ಭಟ್ಕಳ ತಾಲೂಕಿನ ಕುಂಟವಾಣಿ ಗ್ರಾಮದಲ್ಲಿ ನಡೆದಿದೆ.

ಕುಂಟವಾಣಿ ಗ್ರಾಮದ ನಿವಾಸಿ, ಕೃಷಿಕ ಶ್ರೀನಿವಾಸ ಚಿಕ್ಕಯ್ಯ ಶೆಟ್ಟಿ (62) ಮೃ*ತರು. ಮನೆಯ ಸಮೀಪದ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯುವ ಕೆಲಸದಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಡಿಕೆ ಮರಕ್ಕೆ ಏರಲು ಶ್ರೀನಿವಾಸ ಶೆಟ್ಟಿ ಅವರು ಅಲ್ಯೂಮಿನಿಯಂ ಏಣಿಯನ್ನು ಬಳಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಏಣಿ ಸಮೀಪದಲ್ಲಿದ್ದ 11 ಕೆ.ವಿ. ವಿದ್ಯುತ್ ಮಾರ್ಗದ ತಂತಿಗೆ ಆಕಸ್ಮಿಕವಾಗಿ ತಾಗಿದೆ. ಕ್ಷಣಾರ್ಧದಲ್ಲೇ ವಿದ್ಯುತ್ ಪ್ರವಹಿಸಿದ ಪರಿಣಾಮ ಶ್ರೀನಿವಾಸ ಶೆಟ್ಟಿ ಅವರಿಗೆ ತೀವ್ರ ವಿದ್ಯುತ್ ಆಘಾತವಾಗಿದೆ. ಬಳಿಕ ಅವರು ಕೆಳಗೆ ಬಿದ್ದು ಗಂಭೀರ ಸ್ಥಿತಿಗೆ ತಲುಪಿದ್ದಾರೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದರಾದರೂ, ಅಷ್ಟರಲ್ಲಾಗಲೇ ಶ್ರೀನಿವಾಸ ಶೆಟ್ಟಿ ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಡಿಕೆ ತೋಟದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ಮಾರ್ಗದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಎಂತಹ ಅಪಾಯ ಎದುರಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯಾಗಿದೆ.

ಮೃತರ ಪುತ್ರ ಪ್ರಶಾಂತ ಶ್ರೀನಿವಾಸ ಶೆಟ್ಟಿ (38) ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250