ಕಾರವಾರ: ಗೋವಾದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಇದೀಗ ಕಾರವಾರಕ್ಕೂ ವಿಸ್ತರಿಸಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಗರದಲ್ಲಿ ಮಹತ್ವದ ಶೋಧ ನಡೆಸಿದ್ದಾರೆ.
ಕೋಡಿಬಾಗದ ಅಬಕಾರಿ ಕಚೇರಿ ಎದುರಿನ ಅಪಾರ್ಟ್ಮೆಂಟ್ನಲ್ಲಿರುವ ಒಂದೇ ಉದ್ಯಮಿಗೆ ಸೇರಿದ ನಾಲ್ಕು ಫ್ಲಾಟ್ಗಳನ್ನು ಇಡಿ ತಂಡ ಪರಿಶೀಲಿಸಿದೆ. ಗೋವಾದಿಂದ ಆಗಮಿಸಿದ್ದ ಅಧಿಕಾರಿಗಳು ಹಲವು ಗಂಟೆಗಳ ಕಾಲ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಿರುವುದು ತಿಳಿದುಬಂದಿದೆ. ಆಸ್ತಿಗಳ ಖರೀದಿಗೆ ಹಣ ಎಲ್ಲಿಂದ ಬಂದಿದೆ ಹಾಗೂ ಪ್ರಕರಣದಲ್ಲಿನ ಹಣಕಾಸಿನ ವಹಿವಾಟಿನೊಂದಿಗೆ ಈ ಆಸ್ತಿಗಳಿಗೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ತನಿಖಾ ತಂಡ ಪರಿಶೀಲಿಸಿದೆ ಎನ್ನಲಾಗಿದೆ.
ಶಿವಮೊಗ್ಗ ಮೂಲದವರೆಂದು ಹೇಳಲಾಗಿರುವ ಸುಲೇಮಾನ್ ಖಾನ್ ಅಲಿಯಾಸ್ ಸಿದ್ದಿಕ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹಿಂದೆ ಕಾರವಾರದಲ್ಲಿ ಸುಮಾರು ಐದು ವರ್ಷ ವಾಸವಾಗಿದ್ದ ಎನ್ನಲಾಗಿದೆ. ನಂತರ ಗೋವಾಕ್ಕೆ ತೆರಳಿದ್ದ ಆತನ ವಿರುದ್ಧ ಅಲ್ಲಿನ ಮೃತರ ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಆರೋಪ ಕೇಳಿಬಂದಿತ್ತು.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಗೋವಾ ಎಸ್ಐಟಿ 2024ರಲ್ಲಿ ಸಿದ್ದಿಕ್ ಖಾನ್ನನ್ನು ಬಂಧಿಸಿತ್ತು. ಜೈಲಿನಿಂದ ಪರಾರಿಯಾದ ಬಳಿಕ ಕೇರಳದಲ್ಲಿ ಮತ್ತೆ ಆತನನ್ನು ಬಂಧಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಕಾರವಾರದಲ್ಲಿದ್ದ ಆತನ ಆಸ್ತಿಗಳ ಮೇಲೂ ಎಸ್ಐಟಿ ಕ್ರಮ ಕೈಗೊಂಡಿತ್ತು.
ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಡಿ ತನಿಖೆ ಕೈಗೆತ್ತಿಕೊಂಡಿದ್ದು, ಸಿದ್ದಿಕ್ ಖಾನ್ನನ್ನು ಜುಲೈನಲ್ಲಿ ಬಂಧಿಸಿತ್ತು. ಸುಮಾರು 300 ಕೋಟಿ ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಅಕ್ರಮ ಹಣದ ಮೂಲಕ ಖರೀದಿಸಿರುವ ಆರೋಪವೂ ತನಿಖೆಯಲ್ಲಿದೆ.
ಈ ಹಿನ್ನೆಲೆಯಲ್ಲಿ ಕಾರವಾರದ ನಾಲ್ಕು ಫ್ಲಾಟ್ಗಳ ಮೇಲೆ ನಡೆದಿರುವ ಇಡಿ ಶೋಧ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಪ್ರಮುಖ ಹಂತವಾಗಿದೆ. ಫ್ಲಾಟ್ಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಮಾಹಿತಿಯನ್ನು ಸಂಗ್ರಹಿಸಿರುವ ಅಧಿಕಾರಿಗಳು, ಅವುಗಳ ಆಸ್ತಿ ವಹಿವಾಟಿನೊಂದಿಗೆ ಇರುವ ಸಂಬಂಧದ ಕುರಿತು ಮುಂದಿನ ತನಿಖೆ ನಡೆಸಲಿದ್ದಾರೆ.
