ವರದಾ ಹೋಟೆಲ್‌ನಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಗ್ಲಾಸ್ ಪುಡಿಪುಡಿ ಮಾಡಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೋಟೆಲ್‌ನ ರಾಘವ ಕೃಷ್ಣಯ್ಯ ನಾಯ್ಕ ನೀಡಿದ ದೂರಿನ ಮೇರೆಗೆ ಮಾಸೂರ ಕ್ರಾಸ್ ಜನತಾ ಪ್ಲಾಟ್ ನಿವಾಸಿ, ವ್ಯಾಪಾರಿ ಗುರುದತ್ತ ಜಿ. ಪಟಗಾರ (30) ಎಂಬಾತನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 4 ರಂದು ಸಂಜೆ 4.15 ರ ಸುಮಾರಿಗೆ ವರದಾ ಹೋಟೆಲ್‌ಗೆ ಬಂದ ಆರೋಪಿ ಗುರುದತ್ತ ಪಟಗಾರ, ಕ್ಯಾಷಿಯರ್ ದರ್ಶನ್ ನಾಯ್ಕ ಬಳಿ ಮತ್ತೆ 60 ಎಂ.ಎಲ್. ಸರಾಯಿ ಕೊಡುವಂತೆ ಕೇಳಿದ್ದಾನೆ. ಕ್ಯಾಷಿಯರ್ ಈಗ ಸರಾಯಿ ಕೊಡುವುದಿಲ್ಲ ಎಂದು ಹೇಳಿದಾಗ ರೊಚ್ಚಿಗೆದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ಬೈದು ಆತನ ಮೈಮೇಲೆ ಹಲ್ಲೆ ಮಾಡಲು ಬಂದಿದ್ದಾನೆ. ಇದನ್ನು ಗಮನಿಸಿದ ಹೋಟೆಲ್ ರಾಘವ ನಾಯ್ಕ ಮಧ್ಯಪ್ರವೇಶಿಸಿ, ಏಕೆ ಬೈಯುತ್ತಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ.
ಆಗ ಇನ್ನಷ್ಟು ಆಕ್ರೋಶಗೊಂಡ ಆರೋಪಿ, ಅವರಿಗೂ ಅಶ್ಲೀಲವಾಗಿ ನಿಂದಿಸಿ ಕೌಂಟರ್ ಮೇಲಿದ್ದ ‘ಸೆವೆನ್ ಅಪ್’ ಬಾಟಲಿಯಿಂದ ಬೀಸಿ ಹೊಡೆದಿದ್ದಾನೆ. ಬಾಟಲಿ ಏಟು ರಾಘವ ಅವರ ಬಲಗೈ ಹಸ್ತಕ್ಕೆ ತಾಗಿ ತೀವ್ರ ಒಳನೋವು ಉಂಟಾಗಿದೆ. ಅಷ್ಟಕ್ಕೇ ಸುಮ್ಮನಾಗದ ಆರೋಪಿಯು ಬಿಯರ್ ಬಾಟಲಿ ತೋರಿಸಿ ಕ್ಯಾಷಿಯರ್ ದರ್ಶನ್ ಮೇಲೂ ಹಲ್ಲೆಗೆ ಮುಂದಾಗಿದ್ದು, ಹೋಟೆಲ್‌ನ ಗಾಜುಗಳನ್ನು ಒಡೆದು ಹಾಕಿ, ಇಬ್ಬರಿಗೂ ಒಂದು ಗತಿ ಕಾಣಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
