ಎಮ್ಮೆಗಳನ್ನು ಮೇಯಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದ ಘಟನೆ ಜೋಯಿಡಾ ತಾಲೂಕಿನ ಪಣಸೋಲಿ ಸಮೀಪ ರವಿವಾರ ನಡೆದಿದೆ.
ಘಟನೆಯಲ್ಲಿ ಅಪ್ಪು ಬೊಮ್ಮ ಪಿಂಗಳೆ (34) ಗಾಯಗೊಂಡಿದ್ದಾರೆ. ಅಪ್ಪು ಅವರು ಎಮ್ಮೆಗಳನ್ನು ಮೇಯಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಕರಡಿ ಏಕಾಏಕಿ ಅವರ ಮೇಲೆ ಎರಗಿ ದಾಳಿ ನಡೆಸಿದೆ.
ಕರಡಿಯಿಂದ ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸಿದರೂ ದಾಳಿಯಲ್ಲಿ ಬಲ ಭುಜ, ಸೊಂಟ, ಬೆನ್ನು ಹಾಗೂ ಎಡಗೈ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ದಾಳಿ ನಡೆದ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಅಪ್ಪು ಅವರನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಜನನಿಬಿಡ ಪ್ರದೇಶದ ಸಮೀಪವೇ ಕರಡಿ ಕಾಣಿಸಿಕೊಂಡು ದಾಳಿ ನಡೆಸಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪಣಸೋಲಿ ಭಾಗದಲ್ಲಿ ಕರಡಿ ಸಂಚಾರದ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
