ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ಧಾರವಾಡದಲ್ಲಿ ಕೃಷಿ ಮೇಳ: ‘ಸಶಕ್ತ ಮಹಿಳೆ, ಸುಸ್ಥಿರ ಕೃಷಿ’ಗೆ ಒತ್ತು

Pakka News Web • 18 ಸೆಪ್ಟೆಂ 2026,

ಕಾರವಾರ:ಕೃಷಿಕರ ಪಾಲಿಗೆ ಜ್ಞಾನದ ಮಹಾಪೂರವನ್ನೇ ತೆರೆದಿಡುವ ಬಹುನಿರೀಕ್ಷಿತ ಧಾರವಾಡ ಕೃಷಿ ಮೇಳವು ಸೆಪ್ಟೆಂಬರ್ 25 ರಿಂದ 28 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಬಾರಿಯ ಮೇಳವು ‘ಸಶಕ್ತ ಮಹಿಳೆ, ಸುಸ್ಥಿರ ಕೃಷಿ’ ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ಜರುಗಲಿದ್ದು, ರೈತರು, ರೈತ ಮಹಿಳೆಯರು, ವಿಸ್ತರಣಾ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಯುವಜನತೆ ಸೇರಿದಂತೆ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ಬಾರಿಯ ಮೇಳದಲ್ಲಿ ಸುಸ್ಥಿರ, ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳು, ಗುಣಮಟ್ಟದ ಬೀಜಗಳ ಮೇಳ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಕುರಿತ ಮಹತ್ವದ ಮಾಹಿತಿ ದೊರೆಯಲಿದೆ. ಸಮಗ್ರ ಬೆಳೆ ಮತ್ತು ಪೋಷಕಾಂಶ ನಿರ್ವಹಣೆ, ಕೀಟ ಹಾಗೂ ರೋಗ ಬಾಧೆ ತಡೆಗಟ್ಟುವ ಕ್ರಮಗಳು ಮತ್ತು ಮುಂಬರುವ ಹಿಂಗಾರು ಬೆಳೆಗಳ ಆಧುನಿಕ ತಾಂತ್ರಿಕತೆಗಳ ಬಗ್ಗೆ ಕೃಷಿ ತಜ್ಞರೊಂದಿಗೆ ನೇರ ಸಮಾಲೋಚನೆಗೆ ವೇದಿಕೆ ಕಲ್ಪಿಸಲಾಗಿದೆ. ಜೊತೆಗೆ ಕೃಷಿ ನವೋದ್ಯಮಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸಾಧನೆಗಳ ಅನಾವರಣವೂ ಇಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.
ಅಂತರ್ಜಲ ಮರುಪೂರಣ, ಮಳೆನೀರು ಕೊಯ್ಲು, ಕೃಷಿ ಅರಣ್ಯ, ಸುಧಾರಿತ ಪಶುಸಂಗೋಪನೆ, ಜಾನುವಾರು ಪ್ರದರ್ಶನ ಮತ್ತು ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆಗಳೂ ಇರಲಿವೆ. ಕೃಷಿ ಕ್ಷೇತ್ರದಲ್ಲಿ ಆಧುನಿಕ ಡ್ರೋನ್ ತಂತ್ರಜ್ಞಾನದ ಬಳಕೆ, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚವನ್ನು ವಿಶಿಷ್ಟ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡ ರೈತರು ಮತ್ತು ರೈತ ಮಹಿಳೆಯರ ಆವಿಷ್ಕಾರಗಳ ಪ್ರದರ್ಶನ ಹಾಗೂ ಅವರೊಂದಿಗೆ ನೇರ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಡಾ. ಚೆನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ ಪ್ರದಾನ, ಕನ್ನಡ ಕೃಷಿ ಗೋಷ್ಠಿ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಆಕರ್ಷಕ ಸ್ಪರ್ಧೆಗಳು ಜರುಗಲಿವೆ.
ವಸ್ತು ಪ್ರದರ್ಶನದಲ್ಲಿ ಹೈಟೆಕ್ ಮಳಿಗೆಗಳು, ಸಾಮಾನ್ಯ, ಯಂತ್ರೋಪಕರಣ, ಕ್ಷೇತ್ರ ಮತ್ತು ಆಹಾರ ಮಳಿಗೆಗಳ ಜೊತೆಗೆ ಜಾನುವಾರು ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಮಳಿಗೆಗಳನ್ನು ಕಾಯ್ದಿರಿಸಲು 8277478507 ಅಥವಾ 0836-2214497 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಹಾಗೂ ಅಧಿಕೃತ ಜಾಲತಾಣ www.uasd.edu ಭೇಟಿ ನೀಡಬಹುದು ಎಂದು ಕೃಷಿ ಮೇಳದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರೊ. ಮೌನೇಶ್ವರಿ ಕಮ್ಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250