ಮುಂಡಗೋಡ: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾದ 15 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮುಂಡಗೋಡ ಪಟ್ಟಣದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶೇಖರ ಲಮಾಣಿ ಅವರ ಪುತ್ರಿ ಅಂಜನಿ ಲಮಾಣಿ ಮೃತಪಟ್ಟ ಬಾಲಕಿ.
ಅಂಜನಿ ಅವರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ 15ನೇ ವಯಸ್ಸಿನಲ್ಲೇ ಬಾಲಕಿ ಮೃತಪಟ್ಟಿರುವುದು ಕುಟುಂಬದವರನ್ನು ತೀವ್ರ ದುಃಖಕ್ಕೆ ದೂಡಿದೆ. ಅಂಜನಿ ಅವರಲ್ಲಿ ಹೃದಯಾಘಾತ ಸಂಭವಿಸಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಬಾಲಕಿಯ ಅಕಾಲಿಕ ನಿಧನಕ್ಕೆ ಬಂಜಾರ ಸಮಾಜದ ಮುಖಂಡರು, ವಿವಿಧ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದು, ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾರೆ.
