ಕಾರವಾರ:ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣ, ಬಂದರು, ಪ್ರವಾಸೋದ್ಯಮ, ಶಿಕ್ಷಣ, ಮೀನುಗಾರಿಕೆ ಹಾಗೂ ಸ್ಥಳೀಯ ಬುಡಕಟ್ಟು ಸಮುದಾಯಗಳ ಉದ್ಯೋಗಾವಕಾಶಕ್ಕೆ ಸಂಬಂಧಿಸಿದಂತೆ ಬೃಹತ್ ಅನುಮೋದನೆ ದೊರೆತಿದೆ.
ವಿಮಾನ ನಿಲ್ದಾಣದ ರನ್ವೇಯನ್ನು 3,250 ಮೀಟರ್ಗೆ ವಿಸ್ತರಿಸಿ, ಎ-320 ಮಾದರಿಯ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಅನುದಾನವನ್ನು 250.05 ಕೋಟಿಗೆ ಹೆಚ್ಚಿಸಲಾಗಿದ್ದು, 93 ಎಕರೆಗೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಇತ್ತ ಹೊನ್ನಾವರದ ಮಂಕಿಯಲ್ಲಿ 6,925 ಕೋಟಿ ವೆಚ್ಚದಲ್ಲಿ 15 ಎಂಟಿಪಿಎ ಸಾಮರ್ಥ್ಯದ ನೂತನ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಹಸಿರು ನಿಶಾನೆ ಸಿಕ್ಕಿದೆ.
ಇದರಿಂದ ಸುಮಾರು 44,800 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಜೊತೆಗೆ ಕಾರವಾರ, ಅಂಕೋಲಾ ಹಾಗೂ ಭಟ್ಕಳ ತಾಲೂಕು ವ್ಯಾಪ್ತಿಯ ಕುರುಮಗಡ, ದೇವಗಡ ಸೇರಿದಂತೆ ಏಳು ಪ್ರಮುಖ ದ್ವೀಪಗಳನ್ನು 307.71 ಕೋಟಿ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ಆಕರ್ಷಣೆಯನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ-2026ರಡಿ ಬೀಚ್ ಹಾಗೂ ಪಶ್ಚಿಮ ಘಟ್ಟ ಪರಿಸರ ಸರ್ಕ್ಯೂಟ್ಗಳ ಅಭಿವೃದ್ಧಿಗೆ ಆದ್ಯತೆ ಸಿಕ್ಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯ 17 ಕರ್ನಾಟಕ ಪಬ್ಲಿಕ್ ಶಾಲೆಗಳ ಉನ್ನತೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ. ಉತ್ತರ ಕನ್ನಡದ ಕರಾವಳಿಯನ್ನು ‘ವಿಶೇಷ ಸಮುದ್ರ ವಲಯ’ವೆಂದು ಗುರುತಿಸಿ ಮತ್ಸ್ಯೋದ್ಯಮ ರಫ್ತಿಗೆ ಒತ್ತು ನೀಡುವುದರೊಂದಿಗೆ, ಮೀನುಗಾರಿಕೆ ರಸ್ತೆಗಳ ದುರಸ್ತಿಗೆ 20 ಕೋಟಿ ಅನುದಾನ ಹಾಗೂ ಸಿಆರ್ಝಡ್-2019 ನಕ್ಷೆಗಳ ಪರಿಷ್ಕರಣೆಗೂ ಸಂಪುಟ ಒಪ್ಪಿದೆ. ಸ್ಥಳೀಯ ಸಿದ್ದಿ, ಕುಡಿಯ, ಹಲಸರು ಮುಂತಾದ ಅರಣ್ಯ ಬುಡಕಟ್ಟು ಜನರಿಗೆ ಅರಣ್ಯ ರಕ್ಷಕ ಮತ್ತು ವೀಕ್ಷಕ ಹುದ್ದೆಗಳ ನೇರ ನೇಮಕಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲು ನಿಯಮಗಳಿಗೆ ತಿದ್ದುಪಡಿ ತಂದು ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ವೇಗ ನೀಡಲಾಗಿದೆ.
