ಕಾರವಾರ: ಗಣಪತಿ ಮೂರ್ತಿಗಳನ್ನು ರೂಪಿಸಿ ಭಕ್ತರ ಆರಾಧನೆಗೆ ನೀಡುವ ಗಣಪತಿ ಮೂರ್ತಿ ಕಲಾಕಾರರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅಭಿಪ್ರಾಯಪಟ್ಟಿದ್ದಾರೆ. ಕಾರವಾರದ ಮುರಳೀಧರ ಮಠದ ಬಳಿಯ ಇಂದಿರಾಕಾಂತ ಸಭಾಗೃಹದಲ್ಲಿ ರಾಮಕೃಷ್ಣಾಶ್ರಮದ ಭಾವೇಶಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಅವರು ಕಾರವಾರ ತಾಲೂಕಿನ ಗಣಪತಿ ಮೂರ್ತಿ ರೂಪಿಸುವ ನೂರಕ್ಕೂ ಹೆಚ್ಚು ಕಲಾಕಾರರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೌಟುಂಬಿಕ ಜೀವನವನ್ನೂ ಬದಿಗಿಟ್ಟು ತಿಂಗಳಗಟ್ಟಲೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಕಲಾಕಾರರ ಶ್ರಮ ಅಪಾರವಾದದ್ದು ಎಂದರು. ಗಣೇಶ, ದುರ್ಗಾದೇವಿ, ಕೃಷ್ಣ ಸೇರಿದಂತೆ ವಿವಿಧ ದೇವರ ಮೂರ್ತಿಗಳನ್ನು ರೂಪಿಸುವ ಮೂಲಕ ದೇವರ ಸೇವೆ ಮಾಡುತ್ತಿರುವ ನೀವೂ ಗೌರವ ಹಾಗೂ ಅಭಿನಂದನೆಗೆ ಅರ್ಹರು ಎಂದು ಬಣ್ಣಿಸಿದ ಅವರು, ತಲೆತಲಾಂತರಗಳಿಂದ ಈ ಕರಕುಶಲ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ವಿಶೇಷವಾಗಿ ಪರಿಸರಕ್ಕೆ ಪೂರಕವಾದ ಮಣ್ಣಿನಿಂದಲೇ ಗಣಪತಿ ಮೂರ್ತಿಗಳನ್ನು ತಯಾರಿಸಿ, ಕಲೆಯ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಗಣಪತಿ ಮೂರ್ತಿ ಕಲಾಕಾರರಿಗೆ ಮಾಸಾಶನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು ಹಾಗೂ ಕಲಾವಿದರು ಮತ್ತು ಅವರ ಕುಟುಂಬಗಳಿಗೆ ದೇವರು ಸಕಲ ಸೌಭಾಗ್ಯ, ಆರೋಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣಾಶ್ರಮದ ಭಾವೇಶಾನಂದ ಸ್ವಾಮೀಜಿ ಮಾತನಾಡಿ, ಕಲಾಕಾರರನ್ನು ಒಂದೆಡೆ ಸೇರಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದ್ದು, ಕಲೆಯ ಮೂಲಕ ದೇವರ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು ಎಂದರು. ಲೆಕ್ಕಪರಿಶೋಧಕ ಜಗದೀಶ ಬಿರ್ಕೋಡಿಕರ ಮಾತನಾಡಿ, ತಮ್ಮ ಅನುಭವದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಾಕಾರರನ್ನು ಒಟ್ಟಾಗಿ ಗೌರವಿಸಿರುವ ಕಾರ್ಯಕ್ರಮವನ್ನು ಹಿಂದೆಂದೂ ನೋಡಿಲ್ಲವೆಂದರು. ನ್ಯಾಯವಾದಿ ಸಂಜಯ ಸಾಳುಂಕೆ ಮಾತನಾಡಿ, ದೇವರ ಮೂರ್ತಿಗಳನ್ನು ತಯಾರಿಸುವ ಕಲಾಕಾರರ ಕಲಾ ಸೇವೆಯನ್ನು ಗುರುತಿಸಿ ಸತ್ಕರಿಸಿರುವುದು ಅತ್ಯಂತ ಸ್ತುತ್ಯಾರ್ಹ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ರವಿರಾಜ ಅಂಕೋಲೆಕರ, ನಾಗೇಶ್ ಕುರುಡೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಲಾವಿದರಾದ ಮಡಕೈಕರ್ ಹಾಗೂ ಸಂದೀಪ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ, ಮೊದಲ ಬಾರಿಗೆ ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸಿ ರೂಪಾಲಿ ನಾಯ್ಕ ಅವರು ತಮ್ಮನ್ನು ಸತ್ಕರಿಸಿರುವುದು ಹೃದಯತುಂಬಿ ಬಂದಿದೆ ಎಂದು ತಿಳಿಸಿದರು. ನಮ್ಮ ಕಲಾ ಸೇವೆಯನ್ನು ಗುರುತಿಸಿ ನೀಡಿರುವ ಈ ಗೌರವವು ನಮಗೆ ಮತ್ತಷ್ಟು ಉತ್ಸಾಹ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮದನ್ ಮಡಕೈಕರ್, ಗಜಾನನ ನಂದಾ ಆಚಾರಿ, ನೇತಾಜಿ ಆಚಾರಿ, ಸೋಮೇಶ್ವರ ಆಚಾರಿ, ರವಿರಾಜ ಉಗಾ ನಾಯ್ಕ, ಅರುಣ ಮಾಳಸೇಕರ, ರಾಮನಾಥ ಪೆಡ್ನೇಕರ, ರಾಮಾ ಬಾಂದೇಕರ ಸೇರಿದಂತೆ ನೂರಕ್ಕೂ ಹೆಚ್ಚು ಗಣಪತಿ ಮೂರ್ತಿ ಕಲಾಕಾರರಿಗೆ ಶಾಲು, ಹಾರ, ಹಣ್ಣುಹಂಪಲು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಬಾಲ ಕಲಾವಿದರಾದ ರಕ್ಷಕ್ ರವಿ ನಾಯ್ಕ ಹಾಗೂ ರಿಷಿಕೇಶ ಅವರನ್ನು ಗೌರವಿಸಿದ್ದು ಈ ಸಮಾರಂಭದ ವಿಶೇಷವಾಗಿತ್ತು. ರೂಪಾಲಿ ನಾಯ್ಕ ಅವರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಲಾಕಾರರನ್ನು ಒಟ್ಟಿಗೆ ಸನ್ಮಾನಿಸಿ ಗೌರವಿಸಿರುವುದು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಯಿತು. ಸುಭಾಷ್ ಗುನಗಿ ಸ್ವಾಗತಿಸಿ ವಂದಿಸಿದರು, ಚೇತನ ಮಾಳಸೇಕರ ಪ್ರಾರ್ಥನಾಗೀತೆ ಹಾಡಿದರು ಮತ್ತು ಪ್ರಕಾಶ ಕೊಟಾರಕರ ಕಾರ್ಯಕ್ರಮ ನಿರೂಪಿಸಿದರು.

