ಕಾರವಾರ:ನವೆಂಬರ್ನಲ್ಲಿ ಕಾರವಾರದ ಕಡಲತೀರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಕರಾವಳಿ ಸಂಗಮೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಅಮ್ಯೂಸ್ಮೆಂಟ್ ಆಟಗಳು ಹಾಗೂ ಯಾಂತ್ರಿಕ ಮನರಂಜನಾ ಉಪಕರಣಗಳ ಅಳವಡಿಕೆಗೆ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.

ಈ ಕುರಿತು ಮನವಿ ಸಲ್ಲಿಸಿರುವ ವೇದಿಕೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅಕ್ಷಯ ನಾಗೇಕರ್, ಸದ್ಯ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಜನರ ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕು ಎಂದು ಕರವೇ ಆಗ್ರಹ ಮಾಡಿದೆ.
ಕರಾವಳಿ ಸಂಗಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಕಡಲತೀರದಲ್ಲಿ ಅಳವಡಿಸುವ ಯಾಂತ್ರಿಕ ಮನರಂಜನಾ ಉಪಕರಣಗಳು ಮತ್ತು ತಾತ್ಕಾಲಿಕ ಎತ್ತರದ ರಚನೆಗಳು ಸಾರ್ವಜನಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಮಳೆ, ರಭಸದ ಗಾಳಿ ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಎದುರಾಗುವ ಸಾಧ್ಯತೆಯಿರುವುದರಿಂದ, ಇಂತಹ ಸಂದರ್ಭದಲ್ಲಿ ಯಾಂತ್ರಿಕ ಉಪಕರಣಗಳು ಅಸ್ಥಿರಗೊಂಡರೆ ಅಥವಾ ತಾಂತ್ರಿಕ ದೋಷಗಳು ಉಂಟಾದರೆ ಗಂಭೀರ ಅನಾಹುತಗಳು ಸಂಭವಿಸಬಹುದು. ಹೀಗಾಗಿ, ಯಾವುದೇ ಅಹಿತಕರ ಘಟನೆ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ಸಾರ್ವಜನಿಕರಿಗೆ ಮನರಂಜನೆ ಒದಗಿಸುವ ಉತ್ಸವಗಳ ಆಯೋಜನೆ ಸ್ವಾಗತಾರ್ಹ. ಆದರೆ, ಇಂತಹ ಕಾರ್ಯಕ್ರಮಗಳಲ್ಲಿ ಜನರ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಆದ್ದರಿಂದ, ಕರಾವಳಿ ಸಂಗಮೋತ್ಸವದ ಸಂದರ್ಭದಲ್ಲಿ ಅಪಾಯಕ್ಕೆ ಕಾರಣವಾಗಬಹುದಾದ ಅಮ್ಯೂಸ್ಮೆಂಟ್ ಆಟಗಳು ಹಾಗೂ ಯಾಂತ್ರಿಕ ಮನರಂಜನಾ ಉಪಕರಣಗಳ ಅಳವಡಿಕೆಗೆ ಅನುಮತಿ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ, ಉತ್ಸವದ ವೇಳೆ ಸಂಭವನೀಯ ಅನಾಹುತಗಳನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮನವಿ ಮಾಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇದ್ದರು.
