ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮಹತ್ವದ ಪಿಂಚಣಿ ಸೌಲಭ್ಯ ದೊರೆಯುವಂತಾಗಿದೆ. 2006ರ ಏಪ್ರಿಲ್ 1ಕ್ಕೂ ಮುನ್ನ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಅದರ ಆಧಾರದ ಮೇಲೆ ಏಪ್ರಿಲ್ 1, 2006ರಂದು ಅಥವಾ ನಂತರ ಸರ್ಕಾರಿ ಸೇವೆಗೆ ಸೇರಿದ ಅರ್ಹ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆ (OPS) ವ್ಯಾಪ್ತಿಗೆ ಒಳಪಡಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಬೆಂಗಳೂರು, ಮೈಸೂರು, ಧಾರವಾಡ ಹಾಗೂ ಕಲಬುರಗಿ ವಿಭಾಗಗಳಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ದೊರೆತ ಹಿನ್ನೆಲೆಯಲ್ಲಿ ಈ ನಿರ್ಧಾರ ಜಾರಿಗೆ ಬಂದಿದೆ. ಇದರಂತೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2006ರ ಏಪ್ರಿಲ್ 1ಕ್ಕೂ ಮುನ್ನ ನೇಮಕಾತಿ ಅಧಿಸೂಚನೆ ಹೊರಬಿದ್ದು, ನಂತರ ಸೇವೆಗೆ ಸೇರಿದ ಅರ್ಹ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಹಳೆಯ ಪಿಂಚಣಿ ವ್ಯವಸ್ಥೆಯ ಸೌಲಭ್ಯ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಹೊರಡಿಸಿರುವ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.
ಅರ್ಹ ಶಿಕ್ಷಕರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ನಿಯಮ 2-C ಅನ್ವಯವಾಗುವುದಿಲ್ಲ. ಬದಲಾಗಿ ಸಾಮಾನ್ಯ ಪಿಂಚಣಿ ನಿಯಮಗಳ ಭಾಗ–IVರ provisions ಅನ್ವಯವಾಗಲಿದೆ ಎಂದು ಜ್ಞಾಪನಾ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಬರುವ ಹಿನ್ನೆಲೆಯಲ್ಲಿ, ಅರ್ಹ ಶಿಕ್ಷಕರ ವೇತನದಿಂದ ಎಚ್ಆರ್ಎಂಎಸ್–2.0 ಮೂಲಕ ನಡೆಯುತ್ತಿರುವ ಎನ್ಪಿಎಸ್ ವಂತಿಕೆ ಕಡಿತವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಜತೆಗೆ, ಸಂಬಂಧಪಟ್ಟ ಶಿಕ್ಷಕರಿಗೆ ಹೊಸ ಜಿಪಿಎಫ್ ಖಾತೆಗಳನ್ನು ತೆರೆಯುವ ಪ್ರಕ್ರಿಯೆ ಆರಂಭಿಸಬೇಕಿದೆ.
ಈವರೆಗೆ ಶಿಕ್ಷಕರ ಪಿಆರ್ಎಎನ್ ಖಾತೆಗಳಲ್ಲಿ ಜಮೆಯಾಗಿರುವ ನೌಕರರ ಹಾಗೂ ಸರ್ಕಾರದ ವಂತಿಕೆ ಮೊತ್ತವನ್ನು ನಿಯಮಾನುಸಾರ ಹಿಂಪಡೆದು ಇತ್ಯರ್ಥಪಡಿಸುವ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಡಿಡಿಪಿಐ ಹಾಗೂ ಬಿಇಒಗಳಿಗೆ ಶಿಕ್ಷಣ ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಹೀಗಾಗಿ, 2006ಕ್ಕೂ ಮುನ್ನದ ನೇಮಕಾತಿ ಅಧಿಸೂಚನೆಯ ಆಧಾರದ ಮೇಲೆ ಬಳಿಕ ಸೇವೆಗೆ ಸೇರಿದ ಶಿಕ್ಷಕರ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ.
