ಕಾರವಾರ: ಹೈಕೋರ್ಟ್ ನೀಡಿದ್ದ ಆರು ತಿಂಗಳ ಕಾಲಾವಕಾಶ ಮುಕ್ತಾಯಗೊಂಡರೂ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ರೆಸಾರ್ಟ್ಗಳು ತೆರವಾಗಿಲ್ಲ ಎಂದು ನಾಡುಮಾಸ್ಕೇರಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಈಶ್ವರ ಗೌಡ ಆರೋಪಿಸಿದ್ದಾರೆ.
ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡುಮಾಸ್ಕೇರಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಸುಮಾರು 62 ರೆಸಾರ್ಟ್ಗಳಿದ್ದು, ಈ ಪ್ರದೇಶ ಸಿಆರ್ಜೆಡ್ ವ್ಯಾಪ್ತಿಗೂ ಒಳಪಡುತ್ತದೆ. ನಿಯಮಾನುಸಾರ ನಿರ್ಬಂಧಿತ ಪ್ರದೇಶದಲ್ಲಿ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೂ ಹೊಸ ರೆಸಾರ್ಟ್ಗಳ ನಿರ್ಮಾಣ ನಡೆಯುತ್ತಿದೆ. ಇದರಿಂದ ಕೃಷಿ ಬೆಳೆಗಳಿಗೂ ಹಾನಿಯಾಗುತ್ತಿದೆ ಎಂದು ದೂರಿದರು.
ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ, ರೆಸಾರ್ಟ್ ಮಾಲೀಕರು ಮಾರ್ಚ್ 9ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರು ತಿಂಗಳ ಕಾಲಾವಕಾಶ ಪಡೆದಿದ್ದರು. ಸೆಪ್ಟೆಂಬರ್ 13ರಂದು ಗಡುವು ಮುಕ್ತಾಯಗೊಂಡಿದ್ದರೂ ಒಂದೇ ಒಂದು ರೆಸಾರ್ಟ್ ತೆರವುಗೊಂಡಿಲ್ಲ. ಬದಲಾಗಿ ಇಂದಿಗೂ ರೆಸಾರ್ಟ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಈಶ್ವರ ಗೌಡ ಆರೋಪಿಸಿದರು.
ರೆಸಾರ್ಟ್ಗಳು ಕಾರ್ಯನಿರ್ವಹಿಸುತ್ತಿರುವುದನ್ನು ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ವೇಳೆ ಗಮನಿಸಿ ತಹಶೀಲ್ದಾರ್ಗೆ ವರದಿ ನೀಡಿದ್ದರೂ ಇದುವರೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಗೋಕರ್ಣ ವ್ಯಾಪ್ತಿಯಲ್ಲಿಯೂ ಸಿಆರ್ಜೆಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದರೂ ವರದಿಗಳು ಸಲ್ಲಿಕೆಯಾಗದಿರುವುದನ್ನು ಅವರು ಪ್ರಸ್ತಾಪಿಸಿದರು. ಸಿಆರ್ಜೆಡ್ ನಿಯಮ ಉಲ್ಲಂಘನೆಯ ಮೂರು ಪ್ರಕರಣಗಳನ್ನು KSCZMAಗೆ ಶಿಫಾರಸು ಮಾಡುವ ಕುರಿತು ಪರಿಸರ ಇಲಾಖೆಯ ಸಭೆಯಲ್ಲೂ ಚರ್ಚೆಯಾಗಿತ್ತು ಎಂದು ತಿಳಿಸಿದರು.
ಹೈಕೋರ್ಟ್ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನಿನಲ್ಲಿರುವ ಅನಧಿಕೃತ ರೆಸಾರ್ಟ್ಗಳನ್ನು ತಕ್ಷಣ ತೆರವುಗೊಳಿಸಿ, ಸಿಆರ್ಜೆಡ್ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬೇಕು. ಸರ್ಕಾರಿ ಭೂಮಿಯನ್ನು ಸಾರ್ವಜನಿಕರು ಹಾಗೂ ಮೀನುಗಾರರ ಹಿತಕ್ಕಾಗಿ ಸಂರಕ್ಷಿಸಬೇಕು ಎಂದು ಈಶ್ವರ ಗೌಡ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಡುಮಾಸ್ಕೇರಿ ಗ್ರಾಪಂ ನಿಕಟಪೂರ್ವ ಸದಸ್ಯರಾದ ನಾಗರಾಜ್ ನಾಯ್ಕ, ರವಿ ಮೋರ್ಜೆ, ದಯಾನಂದ ಮೇಥಾ, ಕೃಷ್ಣಾನಂದ ನಾಯ್ಕ ಇದ್ದರು.
