ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಪಾದಕ್ಕೆ ರಕ್ಷಣೆ ನೀಡುವ ಚಪ್ಪಲಿಗಳನ್ನೇ ಎಸೆದ ವಿದ್ಯಾರ್ಥಿಗಳು

Pakka News Web • 24 ಸೆಪ್ಟೆಂ 2026,

ಮುಂಡಗೋಡ: ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸಿದ ಪಾದರಕ್ಷೆಗಳ ಗುಣಮಟ್ಟದ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಅವುಗಳನ್ನು ಸ್ವೀಕರಿಸಲು ನಿರಾಕರಿಸಿದ ಘಟನೆ ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ವಿದ್ಯಾರ್ಥಿಗಳ ಬಳಕೆಗೆಂದು ವಿತರಿಸಲಾಗಿರುವ ಪಾದರಕ್ಷೆಗಳು ನಿರೀಕ್ಷಿತ ಗುಣಮಟ್ಟ ಹೊಂದಿಲ್ಲ ಎಂಬುದು ಪಾಲಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸದಸ್ಯರ ಆರೋಪವಾಗಿದೆ. ಪಾದರಕ್ಷೆಗಳ ತಯಾರಿಕೆ ಹಾಗೂ ಗುಣಮಟ್ಟ ಮಕ್ಕಳ ದೈನಂದಿನ ಬಳಕೆಗೆ ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿದ ಅವರು, ಇಂತಹ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸಿರುವ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವರು ಪಾದರಕ್ಷೆಗಳನ್ನು ಸ್ವೀಕರಿಸದೇ ತಿರಸ್ಕರಿಸಿರುವುದಾಗಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ನಡೆದ ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಈ ವಿಚಾರವನ್ನು ಗಂಭೀರವಾಗಿ ಚರ್ಚಿಸಿದರು. ಸರ್ಕಾರ ಮಕ್ಕಳಿಗೆ ಒದಗಿಸುವ ಉಚಿತ ಸೌಲಭ್ಯಗಳು ಕೇವಲ ವಿತರಿಸುವುದಕ್ಕೆ ಸೀಮಿತವಾಗದೆ, ನಿಗದಿತ ಗುಣಮಟ್ಟವನ್ನು ಹೊಂದಿರಬೇಕು. ಕಳಪೆ ಗುಣಮಟ್ಟದ ಸಾಮಗ್ರಿಗಳ ವಿತರಣೆಯಿಂದ ಮಕ್ಕಳಿಗೆ ತೊಂದರೆ ಉಂಟಾದರೆ ಹೊಣೆ ಯಾರು ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟರು.

ವಿತರಿಸಿರುವ ಪಾದರಕ್ಷೆಗಳ ಗುಣಮಟ್ಟವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಗುಣಮಟ್ಟದಲ್ಲಿ ಲೋಪ ಕಂಡುಬಂದಲ್ಲಿ ಈಗಾಗಲೇ ವಿತರಿಸಿರುವ ಪಾದರಕ್ಷೆಗಳನ್ನು ಹಿಂಪಡೆದು, ನಿಗದಿತ ಮಾನದಂಡಕ್ಕೆ ಅನುಗುಣವಾದ ಹೊಸ ಪಾದರಕ್ಷೆಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಆಗ್ರಹಿಸಿದ್ದಾರೆ.

ಇಷ್ಟಕ್ಕೆ ನಿಲ್ಲದೆ, ಪಾದರಕ್ಷೆಗಳ ಗುಣಮಟ್ಟಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ ಲೋಕಾಯುಕ್ತರಿಗೂ ದೂರು ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಸ್‌ಡಿಎಂಸಿ ಹಾಗೂ ಪಾಲಕರು ತಿಳಿಸಿದ್ದಾರೆ.

ಮಕ್ಕಳಿಗೆ ನೀಡುವ ಸರ್ಕಾರಿ ಸೌಲಭ್ಯಗಳ ಗುಣಮಟ್ಟದ ಬಗ್ಗೆ ಈಗಲೇ ಪರಿಶೀಲನೆ ನಡೆಯಬೇಕು. ಈ ಆರೋಪದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ವಾಸ್ತವಾಂಶ ಬಹಿರಂಗಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಇದೀಗ ಕೇಳಿಬಂದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250