ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಕಸ್ತೂರಿ ರಂಗನ್ ವರದಿ: ಜನವಸತಿ, ಕೃಷಿಭೂಮಿಗೆ ವಿನಾಯಿತಿ ನೀಡಲು ಕಾಗೇರಿ ಒತ್ತಾಯ

Pakka News Web • 25 ಸೆಪ್ಟೆಂ 2026,

ಕಾರವಾರ: ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರವು ವಾಸ್ತವಾಂಶ ಆಧಾರಿತ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಸುದೀರ್ಘ ಹಾಗೂ ಅರ್ಥಪೂರ್ಣ ಚರ್ಚೆ ನಡೆದಿರುವುದು ಸ್ವಾಗತಾರ್ಹ. ಪಶ್ಚಿಮ ಘಟ್ಟ ಪ್ರದೇಶದ ನಿವಾಸಿಗಳ ನೈಜ ಸ್ಥಿತಿಗತಿ, ಅವರ ದೈನಂದಿನ ಸಂಕಷ್ಟಗಳು ಹಾಗೂ ಜೀವನೋಪಾಯದ ವಿಚಾರಗಳನ್ನು ಗಂಭೀರವಾಗಿ ಪ್ರಸ್ತಾಪಿಸಿದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಆಧರಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ವಿಶೇಷ ಸಮಿತಿ ರಚಿಸಲು ಮುಂದಾಗಿರುವುದು ಸೂಕ್ತ ಕ್ರಮವಾಗಿದೆ. ಆದರೆ ಸಮಿತಿಯು ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಪಶ್ಚಿಮ ಘಟ್ಟದಲ್ಲಿ ತಲೆತಲಾಂತರಗಳಿಂದ ನೆಲೆಸಿರುವ ಮೂಲ ನಿವಾಸಿಗಳು, ರೈತರು ಹಾಗೂ ಶ್ರಮಿಕರ ಬದುಕು ಮತ್ತು ಜೀವನೋಪಾಯದ ಹಕ್ಕಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ವಿಶೇಷವಾಗಿ ಗಮನಹರಿಸಬೇಕು ಎಂದು ಕಾಗೇರಿ ಹೇಳಿದ್ದಾರೆ.

ಜನರು ವಾಸಿಸುತ್ತಿರುವ ಪ್ರದೇಶಗಳು, ಕೃಷಿಭೂಮಿ, ಮನೆಗಳು, ನಿವೇಶನಗಳು, ಅತಿಕ್ರಮಣ ಭೂಮಿ ಹಾಗೂ ರಸ್ತೆ ಮತ್ತು ಸಣ್ಣ ಕೈಗಾರಿಕೆಗಳಂತಹ ಮೂಲಸೌಕರ್ಯಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬೇಕು. ಸಂಪೂರ್ಣ ಜನವಸತಿ ಪ್ರದೇಶಗಳಿಗೂ ವಿನಾಯಿತಿ ನೀಡುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಅದೇ ರೀತಿ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯನ್ನು ನೈಜ ಅರಣ್ಯ ಪ್ರದೇಶಗಳಿಗೆ ಮಾತ್ರ ವೈಜ್ಞಾನಿಕವಾಗಿ ಸೀಮಿತಗೊಳಿಸಬೇಕು. ಅರಣ್ಯವಲ್ಲದ ಜನವಸತಿ ಹಾಗೂ ಕೃಷಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸದಂತೆ ಸಮಿತಿ ವಾಸ್ತವಾಧಾರಿತ ವರದಿ ಸಿದ್ಧಪಡಿಸಬೇಕು ಎಂದು ಕಾಗೇರಿ ಒತ್ತಾಯಿಸಿದ್ದಾರೆ.

ಪಶ್ಚಿಮ ಘಟ್ಟದ ಜನರ ನ್ಯಾಯಯುತ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಜನವಸತಿ, ಕೃಷಿಭೂಮಿ ಹಾಗೂ ಅರಣ್ಯ ಅತಿಕ್ರಮಣ ಭೂಮಿಯನ್ನು ಹೊರತುಪಡಿಸಿದ ವರದಿಯನ್ನು ಸರ್ಕಾರ ಸಿದ್ಧಪಡಿಸಬೇಕು. ಅದರ ಆಧಾರದ ಮೇಲೆ ನ್ಯಾಯಾಲಯಕ್ಕೆ ಸೂಕ್ತ ಮೇಲ್ಮನವಿ ಸಲ್ಲಿಸುವುದರ ಜೊತೆಗೆ, ವರದಿ ಸಿದ್ಧಪಡಿಸಲು ಅಗತ್ಯವಿರುವ ಹೆಚ್ಚುವರಿ ಕಾಲಾವಕಾಶ ಪಡೆಯಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟದ ಜನರಲ್ಲಿ ಮೂಡಿರುವ ಆತಂಕ, ಭಯ ಮತ್ತು ಅಭದ್ರತೆಯ ಭಾವನೆಯನ್ನು ದೂರಗೊಳಿಸಿ, ಅವರ ನೆಮ್ಮದಿಯ ಬದುಕಿಗೆ ಅಗತ್ಯ ಕಾನೂನಾತ್ಮಕ ಪರಿಹಾರ ಒದಗಿಸುವಂತೆ ಸರ್ಕಾರವನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250