ಮುಂಡಗೋಡ: ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಲಾಗಿದ್ದ ಪಾದರಕ್ಷೆಗಳ ಗುಣಮಟ್ಟದ ಬಗ್ಗೆ ಪಾಲಕರು ಹಾಗೂ ಎಸ್ಡಿಎಂಸಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರದಿಂದ ನೀಡಲಾಗಿರುವ ಪಾದರಕ್ಷೆಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಆರೋಪಿಸಿದ್ದ ಪಾಲಕರು, ಅವುಗಳನ್ನು ಮಕ್ಕಳಿಗೆ ವಿತರಿಸಬಾರದು ಎಂದು ವಿರೋಧಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪಾಲಕರು, ಎಸ್ಡಿಎಂಸಿ ಸದಸ್ಯರು ಹಾಗೂ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದರು.
ಶಿಕ್ಷಣ ಇಲಾಖೆಯ ಇಒ ನಾಗರಾಜ್ ನಾಯ್ಕ್ ಹಾಗೂ ವಿಷಯ ಪರಿವೀಕ್ಷಕ ಸುರೇಶ್ ಶೆಟ್ಟಿ ಸೇರಿದಂತೆ ಅಧಿಕಾರಿಗಳು ಪಾದರಕ್ಷೆಗಳನ್ನು ಪರಿಶೀಲಿಸಿ, ಅವುಗಳ ಗುಣಮಟ್ಟದ ಕುರಿತು ಪಾಲಕರು ವ್ಯಕ್ತಪಡಿಸಿದ ಅಸಮಾಧಾನವನ್ನು ಆಲಿಸಿದರು. ಮಕ್ಕಳಿಗೆ ಈ ಪಾದರಕ್ಷೆಗಳು ಬೇಡ ಎಂಬುದು ಪಾಲಕರ ನಿಲುವಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ವಿತರಿಸಲಾಗಿರುವ ಪಾದರಕ್ಷೆಗಳನ್ನು ಶಾಲೆಯಿಂದ ವಾಪಸ್ ಪಡೆದು ಶಿಕ್ಷಣ ಇಲಾಖೆಯ ಮೂಲಕ ಸರ್ಕಾರ ಹಾಗೂ ಸಂಬಂಧಪಟ್ಟ ಕಂಪನಿಗೆ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಕರೊಂದಿಗೆ ನಡೆಸಿದ ಚರ್ಚೆಯ ಬಳಿಕ ಪಾದರಕ್ಷೆಗಳನ್ನು ವಾಪಸ್ ಪಡೆದುಕೊಳ್ಳುವ ಪ್ರಕ್ರಿಯೆ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಇದರಿಂದ ಗುಣಮಟ್ಟದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಪಾಲಕರಿಗೆ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಲಾಗುವ ಪಾದರಕ್ಷೆ ಸೇರಿದಂತೆ ಶೈಕ್ಷಣಿಕ ಸಾಮಗ್ರಿಗಳ ಗುಣಮಟ್ಟವನ್ನು ವಿತರಣೆಗೆ ಮುನ್ನವೇ ಸಮರ್ಪಕವಾಗಿ ಪರಿಶೀಲಿಸಬೇಕು. ಮಕ್ಕಳಿಗೆ ಗುಣಮಟ್ಟದ ಸಾಮಗ್ರಿಗಳನ್ನೇ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
