ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಮಳೆಗಾಗಿ ಗರೆಗಲ್ಲಿನ ಮೊರೆ ಹೋದ ಕಲಕರಡಿ ಗ್ರಾಮಸ್ಥರು

Pakka News Web • 2 ಆಕ್ಟೋ 2026,

ಶಿರಸಿ: ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿರುವ ನಡುವೆಯೇ, ಉತ್ತಮ ಮಳೆಗಾಗಿ ಕಲಕರಡಿ ಗ್ರಾಮಸ್ಥರು ತಮ್ಮ ಪಾರಂಪರಿಕ ನಂಬಿಕೆಯ ಮೊರೆ ಹೋಗಿದ್ದಾರೆ. ಗ್ರಾಮದ ಪುರಾತನ ಗರೆಗಲ್ಲಿಗೆ ಕೆರೆಯ ನೀರು ತಂದು ಅಭಿಷೇಕ ಮಾಡಿ, ಮಳೆ ಸುರಿಸುವಂತೆ ಪ್ರಾರ್ಥಿಸಿದ್ದಾರೆ.

ಗರೆಗಲ್ಲಿಗೆ ಹಾಕಿದ ನೀರು ಕಾಲುವೆಯ ಮೂಲಕ ಮರಳಿ ಕೆರೆಗೆ ಸೇರುವಂತಾದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಕಲಕರಡಿ ಗ್ರಾಮಸ್ಥರಲ್ಲಿದೆ. ಇದೇ ನಂಬಿಕೆಯ ಆಧಾರದಲ್ಲಿ ಗ್ರಾಮಸ್ಥರು ಹಾಗೂ ಯುವಕರು ಸೇರಿ ಗರೆಗಲ್ಲಿಗೆ ನೀರು ಹಾಕುವ ಆಚರಣೆ ನೆರವೇರಿಸಿದ್ದಾರೆ.

ಹಿಂದೆ ಮಳೆ ಕೊರತೆಯಾದ ಸಂದರ್ಭಗಳಲ್ಲೂ ಇದೇ ರೀತಿಯ ಆಚರಣೆ ನಡೆಸಿದ ಬಳಿಕ ಮಳೆಯಾಗಿರುವುದನ್ನು ಕಂಡಿದ್ದೇವೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯೂ ಮಳೆ ದೇವರು ಕರುಣೆ ತೋರಿ ಉತ್ತಮ ಮಳೆ ಸುರಿಸಲಿದ್ದಾನೆ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.

ಮಳೆಯ ಕೊರತೆಯ ಪರಿಣಾಮ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆಯ ಆತಂಕವೂ ಹೆಚ್ಚಾಗಿದೆ. ಕೆರೆ, ಕಟ್ಟೆ ಹಾಗೂ ಬಾವಿಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೂ ರೈತರು ಪರದಾಡುವಂತಾಗಿದೆ.

ಈ ಹಿನ್ನೆಲೆಯಲ್ಲಿ ಮಳೆಯನ್ನೇ ಎದುರು ನೋಡುತ್ತಿರುವ ರೈತರು, ಉತ್ತಮ ಮಳೆ ಸುರಿದು ಜಲಮೂಲಗಳು ತುಂಬಿ, ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿ ಎಂಬ ಆಶಯದೊಂದಿಗೆ ಗರೆಗಲ್ಲಿಗೆ ನೀರಿನ ಅಭಿಷೇಕ ಮಾಡಿದ್ದಾರೆ.

ಹಿಂದೆಯೂ ಮಳೆ ಕೊರತೆಯಿದ್ದಾಗ ಗರೆಗಲ್ಲಿಗೆ ನೀರು ಹಾಕಿದ ಬಳಿಕ ಮಳೆಯಾಗಿದೆ. ಈ ಬಾರಿಯೂ ಮಳೆ ಬರುತ್ತದೆ ಎಂಬ ನಂಬಿಕೆ ನಮಗಿದೆ” ಎಂದು ಗ್ರಾಮದ ಯುವಕ ಸುಮಂತ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ನಂಬಿಕೆಯೊಂದಿಗೆ ಗರೆಗಲ್ಲಿಗೆ ನೀರು ಅರ್ಪಿಸಿರುವ ಕಲಕರಡಿ ಗ್ರಾಮಸ್ಥರು, ವರುಣ ಕೃಪೆ ತೋರಿ ಕೆರೆ-ಕಟ್ಟೆಗಳು ತುಂಬಿ ರೈತರ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250