ಅಂಕೋಲಾ: ಗ್ರಾಮೀಣ ಪ್ರದೇಶಗಳಲ್ಲಿನ ಅತಿಕ್ರಮಣ ಜಾಗದ ಆಸ್ತಿಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರದ ಯಾವ ಆದೇಶ ಅಥವಾ ಸುತ್ತೋಲೆ ಆಧಾರವಾಗಿದೆ ಎಂಬುದನ್ನು ಶಾಸಕ ಭೀಮಣ್ಣ ನಾಯ್ಕ ಬಹಿರಂಗಪಡಿಸಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಅತಿಕ್ರಮಣ ಜಾಗದಲ್ಲಿರುವ ಆಸ್ತಿಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡುವ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿರುವ ಅವರು, ಈ ವಿಚಾರದಲ್ಲಿ ಶಾಸಕರು ಕೇಂದ್ರ ಸರ್ಕಾರದ ನಿರ್ದೇಶನವನ್ನು ಉಲ್ಲೇಖಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಕೇಂದ್ರದ ಆದೇಶದ ಮೇರೆಗೆ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದ್ದರೆ, ಸಂಬಂಧಿಸಿದ ಕೇಂದ್ರದ ಸುತ್ತೋಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಅತಿಕ್ರಮಣದಾರರ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಕ್ರಮವನ್ನು ವಿರೋಧಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಜಾಗೃತಿ ಮೂಡಿಸುತ್ತಿರುವುದನ್ನು ಸಹಿಸಲಾಗದೆ ಶಾಸಕರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ರಾಜೇಂದ್ರ ನಾಯ್ಕ ಆರೋಪಿಸಿದ್ದಾರೆ. ಶಾಸಕರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಅತಿಕ್ರಮಣದಾರರಿಗೆ ಕಾನೂನುಬದ್ಧವಾಗಿ ಪಟ್ಟಾ ದೊರಕಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತೆರಿಗೆ ವಿನಾಯಿತಿ ನೀಡುವ ಬದಲು ಅತಿಕ್ರಮಣದಾರರ ಜಾಗದ ಹಕ್ಕುಪತ್ರದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು. ರಾಜ್ಯ ಸರ್ಕಾರದ ಆದೇಶವನ್ನು ಯಾವಾಗ ಹಿಂಪಡೆಯಲಾಗುತ್ತದೆ ಎಂಬುದನ್ನೂ ಶಾಸಕ ಭೀಮಣ್ಣ ನಾಯ್ಕ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಆದೇಶ ಹಿಂಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ರಾಜೇಂದ್ರ ನಾಯ್ಕ ತಿಳಿಸಿದ್ದಾರೆ.
