ಅಕ್ಟೋಬರ್ 6, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಕಾರವಾರ–ಇಳಕಲ್ ರಸ್ತೆಗೆ ಕಾಯಕಲ್ಪ ಯಾವಾಗ?

Pakka News Web • 6 ಆಕ್ಟೋ 2026,

ಕಾರವಾರ: ಕಾರವಾರ–ಇಳಕಲ್–ಕೈಗಾ ರಾಜ್ಯ ರಸ್ತೆಯ ಹಳೆಕೋಟೆಯಿಂದ ಕಡವಾಡ ಕ್ರಾಸ್‌ವರೆಗೆ ಇರುವ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಕೆಲವೇ ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಇದೀಗ ಸಂಪೂರ್ಣ ಹಾಳಾಗಿದ್ದು, ಕಾಮಗಾರಿಯ ಗುಣಮಟ್ಟದ ಕೊರತೆಯೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ. ರಸ್ತೆ ನಿರ್ಮಾಣದ ವೇಳೆ ಒಂದು ಬದಿಯ ಪಥಕ್ಕೆ ಮಾತ್ರ ಡಾಂಬರೀಕರಣ ನಡೆಸಲಾಗಿದ್ದು, ಮತ್ತೊಂದು ಬದಿಯ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳದ ಪರಿಣಾಮ ಇದೀಗ ರಸ್ತೆಯ ಅರ್ಧ ಭಾಗ ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಹಳೆಕೋಟೆಯಿಂದ ಕಡವಾಡ ಕ್ರಾಸ್‌ವರೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಹಾಳಾಗಿರುವುದರಿಂದ ಸಂಚಾರ ಕಷ್ಟಕರವಾಗಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ. ಹೊಂಡಗಳನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಹಾಗೂ ಸ್ಕೀಡ್‌ ಆಗಿ ಬೀಳುವ ಘಟನೆಗಳು ಸಂಭವಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ರಸ್ತೆಯ ಹದಗೆಟ್ಟ ಭಾಗವನ್ನು ತಪ್ಪಿಸಲು ವಾಹನಗಳು ವಿರುದ್ಧ ದಿಕ್ಕಿನ ಪಥದಲ್ಲಿ ಸಂಚರಿಸುತ್ತಿರುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗಿದೆ. ಈ ಮಾರ್ಗದಲ್ಲಿ ಬಸ್‌, ಬೈಕ್‌, ಆಟೋ ರಿಕ್ಷಾ ಸೇರಿದಂತೆ ಶಾಲಾ ವಾಹನಗಳಲ್ಲಿ ಪ್ರತಿದಿನ ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ರಾಜಾ ನಾಯ್ಕ ಒತ್ತಾಯಿಸಿದ್ದಾರೆ.

ಕಾರವಾರ–ಇಳಕಲ್ ರಾಜ್ಯ ರಸ್ತೆಯ ಹದಗೆಟ್ಟ ಭಾಗವನ್ನು ಕೂಡಲೇ ದುರಸ್ತಿ ಮಾಡಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250