ಶಿರಸಿ: ಕರ್ನಾಟಕದ ಕಾಫಿ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಗುರುತನ್ನು ತಂದುಕೊಟ್ಟ ದಿಗ್ಗಜ, ದಿವಂಗತ ಉದ್ಯಮಿ ಹಾಗೂ ಕೆಫೆ ಕಾಫಿ ಡೇ (Café Coffee Day) ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಜನ್ಮದಿನವಾದ ಆಗಸ್ಟ್ 23ನ್ನು ಅಧಿಕೃತವಾಗಿ “ಕರ್ನಾಟಕ ಕಾಫಿ ಡೇ” ಎಂದು ಘೋಷಿಸಬೇಕು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪವನ್ ನಾಯ್ಕ್ ಅವರು ರಾಜ್ಯ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಕರ್ನಾಟಕವು ಭಾರತದ ಕಾಫಿ ಕ್ಷೇತ್ರದ ಪ್ರಮುಖ ಕೇಂದ್ರವಾಗಿದ್ದು, ಇದು ರಾಜ್ಯದ ಕೃಷಿ, ಆರ್ಥಿಕತೆ, ಉದ್ಯೋಗ ಹಾಗೂ ಗ್ರಾಮೀಣ ಜನರ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ರಾಜ್ಯದ ಕಾಫಿ ಬೆಳೆಗಾರರು, ಕಾರ್ಮಿಕರು, ಸಣ್ಣ ಹಾಗೂ ಮಧ್ಯಮ ಉದ್ಯಮಿಗಳು ಸೇರಿದಂತೆ ಕಾಫಿ ಕ್ಷೇತ್ರದೊಂದಿಗೆ ನೇರ ಮತ್ತು ಪರೋಕ್ಷವಾಗಿ ಸಂಪರ್ಕ ಹೊಂದಿರುವ ಲಕ್ಷಾಂತರ ಜನರ ಬದುಕಿಗೆ ಈ ಕ್ಷೇತ್ರವೇ ಪ್ರಮುಖ ಆಧಾರವಾಗಿದೆ.
ಕಾಫಿ ಕ್ಷೇತ್ರವನ್ನು ದೇಶ-ವಿದೇಶಗಳಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಮುಖ ವ್ಯಕ್ತಿಗಳಲ್ಲಿ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಕೆಫೆ ಕಾಫಿ ಡೇ ಮೂಲಕ ಕಾಫಿಯನ್ನು ಜನಸಾಮಾನ್ಯರ ಜೀವನಶೈಲಿಯ ಭಾಗವನ್ನಾಗಿ ಮಾಡುವುದರ ಜೊತೆಗೆ, ಯುವಕರಿಗೆ ಉದ್ಯೋಗಾವಕಾಶ, ಉದ್ಯಮಶೀಲತೆ ಮತ್ತು ಹೊಸ ಅವಕಾಶಗಳನ್ನು ಕಲ್ಪಿಸುವಲ್ಲಿ ಅವರು ಅಭೂತಪೂರ್ವ ಪಾತ್ರ ವಹಿಸಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಕರ್ನಾಟಕದ ಕಾಫಿಗೆ ದೇಶ-ವಿದೇಶಗಳಲ್ಲಿ ಮತ್ತಷ್ಟು ಪ್ರಚಾರ ಮತ್ತು ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ “ಕರ್ನಾಟಕ ಕಾಫಿ ಡೇ” ಆಚರಣೆಯನ್ನು ಆರಂಭಿಸುವುದು, ಕಾಫಿ ಬೆಳೆಗಾರರಿಗೆ ಹಾಗೂ ಕಾಫಿ ಕ್ಷೇತ್ರಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಈ ದಿನವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಕಾಫಿ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ವೈಜ್ಞಾನಿಕ ಸಂಶೋಧನೆ, ಆಧುನಿಕ ತಂತ್ರಜ್ಞಾನ, ಮೌಲ್ಯವರ್ಧನೆ, ರಫ್ತು ಉತ್ತೇಜನ ಹಾಗೂ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಸಾರ್ಥಕ ಕಾರ್ಯಕ್ರಮಗಳೊಂದಿಗೆ ಜೋಡಿಸಬೇಕು ಎಂದು ಪವನ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.
ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಜನ್ಮದಿನವಾದ ಆಗಸ್ಟ್ 23ನ್ನು “ಕರ್ನಾಟಕ ಕಾಫಿ ಡೇ” ಎಂದು ಅಧಿಕೃತವಾಗಿ ಘೋಷಿಸುವ ಮೂಲಕ ಅವರ ಸ್ಮರಣೆಯನ್ನು ಗೌರವಿಸುವುದರ ಜೊತೆಗೆ, ಕರ್ನಾಟಕದ ಹೆಮ್ಮೆಯ ಕಾಫಿ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಉನ್ನತ ಮಾನ್ಯತೆ ದೊರಕಿಸಿಕೊಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದಾರೆ.
ಆಗಸ್ಟ್ 23ನ್ನು ಕರ್ನಾಟಕ ಕಾಫಿ ಡೇ ಎಂದು ಘೋಷಿಸಲಿ: ಪವನ್ ನಾಯ್ಕ ಆಗ್ರಹ
