ಶಿರಸಿ: ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಮರಗಳಿಗೆ ಕನ್ನ ಹಾಕುತ್ತಿದ್ದ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ನಾಲ್ವರನ್ನು ಬಂಧಿಸಿದೆ. ಗೋಳಿಕಟ್ಟಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಡಿದು ಹಾಕಲಾಗಿದ್ದ ಶ್ರೀಗಂಧ ಮರಗಳ ದೊಡ್ಡ ಪ್ರಮಾಣದ ತುಂಡುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಗೋಳಿಕಟ್ಟಾ ಗ್ರಾಮದ ಅರಣ್ಯ ಸರ್ವೇ ನಂ.20ರಲ್ಲಿ ಶ್ರೀಗಂಧ ಮರಗಳ ಅಕ್ರಮ ಕಡಿತವಾಗಿರುವ ಕುರಿತು ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಮರಗಳನ್ನು ಕಡಿದು ತುಂಡುಗಳಾಗಿ ಮಾಡಿರುವುದು ಪತ್ತೆಯಾಗಿದ್ದು, 7 ಶ್ರೀಗಂಧದ ಬುಡಚಿಗಳು ಹಾಗೂ 21 ನಗಗಳು ಸ್ಥಳದಲ್ಲಿ ದೊರೆತಿವೆ. ಹಸಿ ಸಿಪ್ಪೆ ಸಹಿತ ಒಟ್ಟು 50.010 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮ ಕಡಿತ ಪ್ರಕರಣಕ್ಕೆ ಸಂಬಂಧಿಸಿ ಉಂಬಳೇಕೊಪ್ಪದ ಸಂತೋಷ ಸಣ್ಯಾ ನಾಯ್ಕ (35), ನವೀನ ಚಂದ್ರಶೇಖರ ದೇವಡಿಗ (30), ಸಹಸ್ರಳ್ಳಿಯ ಮಂಜುನಾಥ ಮಾದೇವ ಗೌಡ (39) ಹಾಗೂ ಮುಂಡಿಗೆಹಳ್ಳಿಯ ಜನಾರ್ಧನ ಗಣಪತಿ ಗೌಡ (29) ಅವರನ್ನು ಅರಣ್ಯ ಇಲಾಖೆ ಬಂಧಿಸಿದೆ. ಬಳಿಕ ಆರೋಪಿಗಳನ್ನು ಶಿರಸಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಸಂಬಂಧ ಬನವಾಸಿ ವಲಯದಲ್ಲಿ ROR No.16/2026-27ರಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಅರಣ್ಯ ಕಾಯ್ದೆಯ ವಿವಿಧ ಕಲಂಗಳು ಹಾಗೂ ಕರ್ನಾಟಕ ಅರಣ್ಯ ನಿಯಮ 1969ರ ನಿಯಮ 154ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಶ್ರೀಗಂಧ ಕಡಿತದ ಹಿಂದಿರುವ ಮತ್ತಷ್ಟು ಮಾಹಿತಿ ಕುರಿತು ತನಿಖೆ ಮುಂದುವರಿದಿದೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ ಚವ್ಹಾಣ ಅವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಕಾರ್ತೀಕ ಕಂಬಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅರಣ್ಯ ಸಿಬ್ಬಂದಿ ಹಾಗೂ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
