ಕಾರವಾರ: ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರಿ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕಾರವಾರ ತಾಲೂಕಿನ ಕಡವಾಡ ಮೂಲದ ಯುವ ನಾವಿಕ ಜಯ್ ಗಾಯಗೊಂಡಿದ್ದು, ಸದ್ಯ ಒಮಾನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಟ್ಟ ಗಾಯಗಳಾಗಿದ್ದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅ. 6 ಮತ್ತು 7ರ ನಡುವೆ ಪನಾಮಾ ಧ್ವಜ ಹೊಂದಿದ್ದ ವ್ಯಾಪಾರಿ ಹಡಗಿನ ಮೇಲೆ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಭಾರತೀಯ ನಾವಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರಲ್ಲಿ ಕಡವಾಡದ ಜಯ್ ಕೂಡ ಸೇರಿದ್ದಾರೆ. ವಿಷಯ ತಿಳಿದ ಅವರ ತಾಯಿ ವಿದೇಶದಿಂದ ಆಸ್ಪತ್ರೆಗೆ ತೆರಳಿ ಮಗನ ಆರೈಕೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗೆ ಒಮಾನ್ನ ಖಸಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯಲ್ಲಿ ಯಾರೂ ಮೃತಪಟ್ಟಿಲ್ಲ ಎನ್ನಲಾಗಿದ್ದು, ಗಾಯಗೊಂಡ ನಾವಿಕರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ, ಘಟನೆಯ ಕುರಿತು ರಾಜ್ಯ ಸರ್ಕಾರವಾಗಲಿ, ಉತ್ತರ ಕನ್ನಡ ಜಿಲ್ಲಾಡಳಿತವಾಗಲಿ ಈವರೆಗೆ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಹೀಗಾಗಿ ಕಡವಾಡದ ಯುವಕ ಗಾಯಗೊಂಡಿರುವ ಬಗ್ಗೆ ಲಭ್ಯವಾಗಿರುವ ಮಾಹಿತಿಯನ್ನು ಜಿಲ್ಲಾಡಳಿತ ದೃಢಪಡಿಸಬೇಕಿದೆ.
ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಗಾಯಗೊಂಡ ನಾವಿಕರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಒದಗಿಸುತ್ತಿವೆ ಎಂದು ತಿಳಿದುಬಂದಿದೆ. ವಿದೇಶದಲ್ಲಿ ಸಂಭವಿಸಿದ ದಾಳಿಯಲ್ಲಿ ಕಡವಾಡದ ಯುವಕ ಗಾಯಗೊಂಡಿರುವ ಸುದ್ದಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
