ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Trending

ಆಂಬುಲೆನ್ಸ್ ವಿಳಂಬ; ಗಾಯಾಳುವಿಗೆ ವೈದ್ಯರೊಬ್ಬರಿಂದ ರಸ್ತೆಯಲ್ಲೇ ಚಿಕಿತ್ಸೆ!

Pakka News Web • 13 ಆಕ್ಟೋ 2026,

ಯಲ್ಲಾಪುರ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯ ಬದಿಯಲ್ಲಿ ನರಳುತ್ತಿದ್ದ ವ್ಯಕ್ತಿಗೆ ಆಂಬುಲೆನ್ಸ್ ಸೇವೆ ಸಕಾಲಕ್ಕೆ ದೊರೆಯದಿದ್ದಾಗ, ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೈದ್ಯರೊಬ್ಬರು ನೆರವಿಗೆ ಧಾವಿಸಿ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಮಾನವೀಯ ಘಟನೆ ತಾಲೂಕಿನ ಮಂಚಿಕೇರಿ ಸಮೀಪದ ತೂಕದಬೈಲ್ ಬಳಿ ನಡೆದಿದೆ.

ಕಲಘಟಗಿ ಮೂಲದ ಮಾರುತಿ ಎಂಬುವವರು ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿ ಬಿದ್ದು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು 108 ಆಂಬುಲೆನ್ಸ್‌ಗೆ ಕರೆ ಮಾಡಿದಾಗ, ಚಾಲಕ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ. ಬಳಿಕ ಮಂಚಿಕೇರಿ ಆಸ್ಪತ್ರೆಯ ಆಂಬುಲೆನ್ಸ್‌ಗಾಗಿ ಸಂಪರ್ಕಿಸಿದಾಗ, ಅದು ಸೇವೆಗಾಗಿ ತೆರಳಿದೆ ಎಂಬ ಮಾಹಿತಿ ದೊರೆತಿದೆ.

ಈ ನಡುವೆ ಗಾಯಾಳು ರಸ್ತೆಯ ಬದಿಯಲ್ಲಿ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ದಿನೇಶ್ ಹೆಗಡೆ ಅವರು ತಮ್ಮ ಕಾರನ್ನು ನಿಲ್ಲಿಸಿ ನೆರವಿಗೆ ಧಾವಿಸಿದರು. ಗಾಯಾಳುವಿನ ಸ್ಥಿತಿಯನ್ನು ಗಮನಿಸಿ ರಸ್ತೆಯಲ್ಲೇ ಡ್ರಿಪ್ಸ್ ಹಾಕಿ, ಇಂಜೆಕ್ಷನ್ ನೀಡಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದರು. ತುರ್ತು ಸಂದರ್ಭದಲ್ಲಿ ವೈದ್ಯರು ತೋರಿದ ಮಾನವೀಯ ಕಾಳಜಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಯಲ್ಲಾಪುರ ತಾಲೂಕು ಆಸ್ಪತ್ರೆಯಿಂದ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳು ಮಾರುತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸತೀಶ ನಾಯ್ಕ ಸೇರಿದಂತೆ ಸ್ಥಳೀಯರು ಸ್ಥಳದಲ್ಲಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳಿಗೆ ತಕ್ಷಣದ ನೆರವು ದೊರೆಯುವುದು ಅತ್ಯಗತ್ಯ. ಆದರೆ, ಆಂಬುಲೆನ್ಸ್ ಸೇವೆಗೆ ಕರೆ ಮಾಡಿದಾಗ ಚಾಲಕ ಲಭ್ಯವಿಲ್ಲ ಎಂಬ ಉತ್ತರ ಬಂದಿರುವುದು ತುರ್ತು ವೈದ್ಯಕೀಯ ಸೇವೆಗಳ ಲಭ್ಯತೆ ಕುರಿತು ಪ್ರಶ್ನೆ ಮೂಡಿಸಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250