ಕಾರವಾರ:ಸ್ವದೇಶಿ ತಂತ್ರಜ್ಞಾನಕ್ಕೆ ಬಲ, ಖಾಸಗಿ ಹಡಗು ನಿರ್ಮಾಣ ಕ್ಷೇತ್ರಕ್ಕೆ ಹೊಸ ಅವಕಾಶ ಹಾಗೂ ಭಾರತದ ಕಡಲ ಭದ್ರತೆಗೆ ಮತ್ತಷ್ಟು ಶಕ್ತಿ. ಈ ಮೂರು ಮಹತ್ವದ ಅಂಶಗಳೊಂದಿಗೆ ಐಎನ್ಎಸ್ ಸಮರ್ಥಕ್ ನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಶೇ.75ಕ್ಕೂ ಅಧಿಕ ಸ್ವದೇಶಿ ಘಟಕಗಳನ್ನು ಹೊಂದಿರುವ ಈ ಬಹುಪಯೋಗಿ ನೌಕೆಯು ಅತ್ಯಾಧುನಿಕ ತಂತ್ರಜ್ಞಾನಗಳ ಪರೀಕ್ಷೆ, ಮಾನವರಹಿತ ವ್ಯವಸ್ಥೆಗಳ ಕಾರ್ಯಾಚರಣೆ, ಸಮುದ್ರ ಕಣ್ಗಾವಲು ಮತ್ತು ವಿಪತ್ತು ಪರಿಹಾರ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಕಾರವಾರದ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನೌಕೆಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿ ಮಾತನಾಡಿದ ಅವರು, ಐಎನ್ಎಸ್ ಸಮರ್ಥಕ್ ಭಾರತದ ರಕ್ಷಣಾ ಸ್ವಾವಲಂಬನೆ ಹಾಗೂ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದರು.

ಜಾಗತಿಕ ಕಡಲ ಭದ್ರತೆಯ ಸವಾಲುಗಳು ಬದಲಾಗುತ್ತಿರುವ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ, ಮಾನವರಹಿತ ವ್ಯವಸ್ಥೆಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ ಹೆಚ್ಚುತ್ತಿದೆ. ಇಂತಹ ತಂತ್ರಜ್ಞಾನಗಳನ್ನು ಪರೀಕ್ಷಿಸಿ, ಅವುಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಸಮರ್ಥಕ್ ಪ್ರಮುಖ ವೇದಿಕೆಯಾಗಲಿದೆ. ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ, ಮೀನುಗಾರರ ರಕ್ಷಣೆ, ನಾಗರಿಕರ ಸ್ಥಳಾಂತರ, ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಕಾರ್ಯಗಳಲ್ಲಿಯೂ ನೌಕಾಪಡೆಯ ಸಾಮರ್ಥ್ಯವನ್ನು ಇದು ವಿಸ್ತರಿಸಲಿದೆ ಎಂದು ತಿಳಿಸಿದರು.
ಭಾರತದ ಕಡಲ ಪರಂಪರೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಚೋಳರ ನೌಕಾ ಪರಂಪರೆಯು ದೇಶದ ಸಮುದ್ರ ಪ್ರಭಾವವನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದರು. ಇಂದು ಸ್ವದೇಶಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಾಮರ್ಥ್ಯದ ಮೂಲಕ ಆ ಪರಂಪರೆಯನ್ನು ಮುಂದುವರಿಸುವ ಅಗತ್ಯವಿದೆ. ನೌಕಾಪಡೆ, ಡಿಆರ್ಡಿಒ, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಉದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಹಕಾರವು ಭಾರತದ ರಕ್ಷಣಾ ಉತ್ಪಾದನೆಗೆ ಬಲ ನೀಡುತ್ತಿದೆ ಎಂದು ಹೇಳಿದರು.
ಕಾರವಾರದ ನೈಸರ್ಗಿಕ ಬಂದರು ಮತ್ತು ಅರಬ್ಬಿ ಸಮುದ್ರಕ್ಕೆ ಇರುವ ಸಮೀಪತೆಯು ಭಾರತದ ಕಡಲ ಭದ್ರತೆಯಲ್ಲಿ ಈ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಿದೆ. ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಅಭಿವೃದ್ಧಿಯಾಗುತ್ತಿರುವ ನೌಕಾ ಮೂಲಸೌಕರ್ಯದಿಂದ ಭವಿಷ್ಯದಲ್ಲಿ ಹೆಚ್ಚಿನ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೆಲೆಗೊಳಿಸಲು ಅನುಕೂಲವಾಗಲಿದೆ. ಇದರಿಂದ ಕಡಲ ಭದ್ರತೆಯ ಜತೆಗೆ ಸ್ಥಳೀಯ ಆರ್ಥಿಕ ಬೆಳವಣಿಗೆಗೂ ಅವಕಾಶಗಳು ಹೆಚ್ಚಲಿವೆ ಎಂದು ಉಪರಾಷ್ಟ್ರಪತಿ ಅಭಿಪ್ರಾಯಪಟ್ಟರು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮಾತನಾಡಿ, ಸಮರ್ಥಕ್ ವಿವಿಧ ನೌಕಾ ಕಾರ್ಯಾಚರಣೆಗಳಿಗೆ ಹೆಚ್ಚಿನ ನಮ್ಯತೆ ಒದಗಿಸಲಿದೆ ಎಂದರು. ಅತ್ಯಾಧುನಿಕ ಶಸ್ತ್ರಾಸ್ತ್ರ, ಎಲೆಕ್ಟ್ರಾನಿಕ್ ವ್ಯವಸ್ಥೆ ಹಾಗೂ ವೈದ್ಯಕೀಯ ಮತ್ತು ಅಗ್ನಿಶಾಮಕ ಸೌಲಭ್ಯಗಳನ್ನು ಹೊಂದಿರುವ ಈ ನೌಕೆಯು ಮಾನವರಹಿತ ವಿಮಾನಗಳ ಕಾರ್ಯಾಚರಣೆ, ಸ್ವದೇಶಿ ವ್ಯವಸ್ಥೆಗಳ ಪರೀಕ್ಷೆ, ದೀರ್ಘಕಾಲದ ಕಡಲ ಗಸ್ತು ಮತ್ತು ತುರ್ತು ನೆರವು ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ತಿಳಿಸಿದರು.
ನೌಕೆಯ ನಿರ್ಮಾಣದಲ್ಲಿ ಕೊಡುಗೆ ನೀಡಿದ ಎಲ್ ಆ್ಯಂಡ್ ಟಿ ಸಂಸ್ಥೆ, ಎಂಜಿನಿಯರ್ಗಳು, ತಂತ್ರಜ್ಞರು, ಕಾರ್ಮಿಕರು ಮತ್ತು ಪೂರೈಕೆದಾರರ ಕಾರ್ಯವನ್ನು ಶ್ಲಾಘಿಸಿದ ಅವರು, ಈ ಯೋಜನೆಯಿಂದ ದೊರೆತ ಅನುಭವವನ್ನು ಮುಂದಿನ ನೌಕೆಗಳ ನಿರ್ಮಾಣದಲ್ಲಿ ಬಳಸಿಕೊಳ್ಳಬೇಕು ಎಂದರು. ನೌಕೆಗೆ ನಿಜವಾದ ಶಕ್ತಿ ತುಂಬುವವರು ಅದರ ಸಿಬ್ಬಂದಿಯಾಗಿದ್ದು, ಶಿಸ್ತು ಮತ್ತು ಸಮರ್ಪಣೆಯಿಂದ ಕಾರ್ಯನಿರ್ವಹಿಸುವುದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಪಶ್ಚಿಮ ನೌಕಾ ಕಮಾಂಡ್ನ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ವೈಸ್ ಅಡ್ಮಿರಲ್ ಸಂಜಯ್ ಸಾಧು, ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ನಿವೃತ್ತ ರಿಯರ್ ಅಡ್ಮಿರಲ್ ಜಿ.ಕೆ. ಹರೀಶ್, ಐಎನ್ಎಸ್ ಸಮರ್ಥಕ್ನ ಕಮಾಂಡಿಂಗ್ ಆಫೀಸರ್ ಕಮಾಂಡರ್ ಸುಶೀಲ್ ಕುಮಾರ್ ಸಿಂಗ್ ಸೇರಿದಂತೆ ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
