ಅಂಕೋಲಾ: ದೇವಸ್ಥಾನದ ಅಭಿವೃದ್ಧಿಯ ಹೆಸರಿನಲ್ಲಿ ನಕಲಿ ದೇಣಿಗೆ ಕೂಪನ್ಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ಪೂಜಗೇರಿಯ ಶ್ರೀ ಬೀದಿಬೀರ ದೇವಸ್ಥಾನದ ಹೆಸರಿನಲ್ಲಿ ಲಾಟರಿ ಕೂಪನ್ ಮಾರಾಟ ಮಾಡುತ್ತಿದ್ದವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದ ಮುಕ್ತೇಸರಿಕೆ ಪ್ರಕರಣ ಬೆಂಗಳೂರಿನ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ ವಿಚಾರಣೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರು, ಅಂಕೋಲಾದ ಉಪ ತಹಶೀಲ್ದಾರರನ್ನು ದೇವಸ್ಥಾನದ ಆಡಳಿತಾಧಿಕಾರಿಯಾಗಿ ನೇಮಿಸಿದ್ದಾರೆ.
ಆದರೂ, ದೇವಸ್ಥಾನದ ಆಡಳಿತಕ್ಕೆ ಸಂಬಂಧವಿಲ್ಲದ ಕೆಲವರು ಯಾವುದೇ ಪರವಾನಗಿ ಪಡೆಯದೆ, ಪ್ರಾಯೋಜಕರು ದಸರಾ ಉತ್ಸವ ಸಮಿತಿ, ಪೂಜಗೇರಿ ಅಂಕೋಲಾ ಎಂಬ ಹೆಸರಿನಲ್ಲಿ ‘ದಸರಾ ದೇಣಿಗೆ ಕೂಪನ್’ಗಳನ್ನು ಮುದ್ರಿಸಿ, ಪ್ರತಿ ಕೂಪನ್ಗೆ 100 ರೂ. ನಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿಬಂದಿದೆ.
ಈ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹಾಗೂ ಕೂಪನ್ಗಳನ್ನು ಜಪ್ತಿ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪ ತಹಶೀಲ್ದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಲಾಟರಿ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
