ಅಂಕೋಲಾ: ಅಡಿಕೆ ತೋಟದಲ್ಲಿ ಕಡವೆಯನ್ನು ಕೊಂದು, ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ತಂಡದ ಮೇಲೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಅಕ್ಟೋಬರ್ 16ರ ರಾತ್ರಿ ಕಲ್ಲೇಶ್ವರ ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಐವರು ಪರಾರಿಯಾಗಿದ್ದಾರೆ.
ತಾಲೂಕಿನ ಕಲ್ಲೇಶ್ವರ ಗ್ರಾಮದ ಲಕ್ಷ್ಮಣ ಬಾಬು ಸಿದ್ದಿ ಅವರ ಅಡಿಕೆ ತೋಟದಲ್ಲಿ ಕಡವೆ ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಮನಗುಳಿ ವಲಯದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಕಡವೆಯನ್ನು ಕೊಂದು, ಚರ್ಮ ಬೇರ್ಪಡಿಸಿ ಮಾಂಸವನ್ನು ಚೀಲಗಳಲ್ಲಿ ತುಂಬುತ್ತಿದ್ದ ತಂಡ ಪತ್ತೆಯಾಗಿದೆ.
ಚನ್ನೇಮನೆಯ ನಾರಾಯಣ ಗುರಕ್ಯಾ ಸಿದ್ದಿ (60) ಬಂಧಿತ ಆರೋಪಿಯಾಗಿದ್ದು, ಅವರನ್ನು ಅಂಕೋಲಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗಣೇಶ ರಾಮು ರಾಠೋಡ, ಲಕ್ಷ್ಮಣ ಬಾಬು ಸಿದ್ದಿ, ಲೋಕೇಶ ನಾರಾಯಣ ಸಿದ್ದಿ, ಶಿವರಾಜ ಲಕ್ಷ್ಮಣ ಸಿದ್ದಿ ಹಾಗೂ ರಾಜು ಕೃಷ್ಣಾ ಸಿದ್ದಿ ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ಮುಂದುವರಿದಿದೆ.
ದಾಳಿಯ ವೇಳೆ ಕಡವೆಯ ಮಾಂಸ, ತಲೆ, ಕಾಲು, ಚರ್ಮ ಸೇರಿದಂತೆ ಅಂಗಾಂಗಗಳಿದ್ದ ಮೂರು ಚೀಲಗಳು, ಮೂರು ಕತ್ತಿ, ಒಂದು ಚಾಕು ಹಾಗೂ ಹೆಡ್ಟಾರ್ಚ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಅಂದಾಜು ₹1.5 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್. ಮಾರಿಯಪ್ಪ ಅವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಫುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿ ದೀಪಕ್ ಎ. ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
