ಕಾರವಾರ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನ ಪ್ರಕ್ರಿಯೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆ ಆರಂಭವಾಗಿದ್ದು, ಬೆಳಿಗ್ಗೆ 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.10.82ರಷ್ಟು ಮತದಾನ ದಾಖಲಾಗಿದೆ. ಕಾರವಾರ ತಾಲೂಕಿನ ಮತಗಟ್ಟೆಗಳಲ್ಲಿಯೂ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸರದಿಯಲ್ಲಿ ನಿಂತು ಮತ ಚಲಾಯಿಸಿದ್ದು ಗಮನ ಸೆಳೆಯಿತು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಮತಗಟ್ಟೆಯಲ್ಲಿ ಸಾರ್ವಜನಿಕರೊಂದಿಗೆ ಸರದಿಯಲ್ಲಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಹಿರಿಯ ಅಧಿಕಾರಿಗಳು ಸಾಮಾನ್ಯ ಮತದಾರರಂತೆ ಸರದಿಯಲ್ಲಿ ನಿಂತು ಮತದಾನದಲ್ಲಿ ಪಾಲ್ಗೊಂಡಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಸಮಾನತೆಯ ಸಂದೇಶ ಸಾರಿತು.
ಚುನಾವಣೆಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 16,039 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೆ 1,735 ಮಂದಿ ಮತ ಚಲಾಯಿಸಿದ್ದು, ಇವರಲ್ಲಿ 987 ಪುರುಷರು ಹಾಗೂ 748 ಮಹಿಳಾ ಮತದಾರರು ಸೇರಿದ್ದಾರೆ. ಈ ಮೂಲಕ ಜಿಲ್ಲೆಯ ಒಟ್ಟು ಮತದಾನ ಪ್ರಮಾಣ ಶೇ.10.82ರಷ್ಟಾಗಿದೆ.
ಇನ್ನು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2026ರ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ಕಾಸ್ಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಕೇಂದ್ರಕ್ಕೆ ಭೇಟಿ ನೀಡಿ, ವೆಬ್ಕಾಸ್ಟಿಂಗ್ ಮೂಲಕ ಮತದಾನ ಪ್ರಕ್ರಿಯೆಗಳ ವೀಕ್ಷಣೆ ಹಾಗೂ ಮೇಲ್ವಿಚಾರಣೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.
ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆಯುವಂತೆ ಚುನಾವಣಾ ವ್ಯವಸ್ಥೆ ಕೈಗೊಂಡಿದ್ದು, ಮತದಾನ ಪ್ರಕ್ರಿಯೆಯ ಮೇಲೆ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದರು. ಜಿಲ್ಲೆಯಲ್ಲಿ ಒಟ್ಟು 16,039 ಮತದಾರರಿದ್ದು, ಬೆಳಿಗ್ಗೆ ಸುಮಾರು ಶೇ.10ರಷ್ಟು ಮತದಾನವಾಗಿದೆ. ಜಿಲ್ಲೆಯಾದ್ಯಂತ 23 ಸಾಮಾನ್ಯ ಮತಗಟ್ಟೆಗಳ ಜೊತೆಗೆ ಹೆಚ್ಚಿನ ಸಂಖ್ಯೆಯ ಮತದಾರರಿರುವ ಎರಡು ಸ್ಥಳಗಳಲ್ಲಿ ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 25 ಮತದಾನ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲ ಮತಗಟ್ಟೆಗಳಲ್ಲಿಯೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಮತದಾರರಿಗೆ ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಮತದಾರರ ಸ್ಲಿಪ್ ವಿತರಿಸಲು ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್ಒ) ನಿಯೋಜಿಸಲಾಗಿದೆ. ಮತದಾರರು ತಮ್ಮ ಮತದಾರರ ಗುರುತಿನ ಚೀಟಿ ಹಾಗೂ ಸ್ಲಿಪ್ನೊಂದಿಗೆ ಮತಗಟ್ಟೆಗೆ ಆಗಮಿಸಬಹುದು. ಒಳಗಿರುವ ಮತಗಟ್ಟೆ ಅಧಿಕಾರಿಗಳು ಮತದಾನ ಪ್ರಕ್ರಿಯೆಯ ಕುರಿತು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಅಗತ್ಯ ದಾಖಲೆಗಳನ್ನು ಭರ್ತಿ ಮಾಡುವುದು, ಮತದಾನಕ್ಕೆ ಸಂಬಂಧಿಸಿದ ನಮೂನೆಗಳನ್ನು ಕ್ರಮಬದ್ಧವಾಗಿ ಜೋಡಿಸುವುದು ಸೇರಿದಂತೆ ಡಿಮಸ್ಟರಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ನಂತರ ಕರಾವಳಿ ಭಾಗದ ಮತಗಟ್ಟೆಗಳಿಂದ ಸಂಗ್ರಹಿಸಲಾದ ಮತಪೆಟ್ಟಿಗೆಗಳನ್ನು ಅಂಕೋಲಾದಲ್ಲಿ ಒಟ್ಟುಗೂಡಿಸಿ, ಸಾಗಣೆ ವ್ಯವಸ್ಥೆಯ ಮೂಲಕ ಧಾರವಾಡಕ್ಕೆ ಕೊಂಡೊಯ್ಯಲಾಗುತ್ತದೆ. ಘಟ್ಟದ ಮೇಲಿನ ಭಾಗದ ಮತಗಟ್ಟೆಗಳ ಮತಪೆಟ್ಟಿಗೆಗಳನ್ನು ಯಲ್ಲಾಪುರದಲ್ಲಿ ಒಟ್ಟುಗೂಡಿಸಿ, ಅಲ್ಲಿಂದ ಧಾರವಾಡಕ್ಕೆ ಸಾಗಿಸಲಾಗುತ್ತದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಅರ್ಹ ಪದವೀಧರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದರು.
