ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಹಳಗಾ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮೊದಲ ಬಾರಿಗೆ ಅಷ್ಟಮಂಗಲ ಪ್ರಶ್ನೆ

Pakka News Web • 24 ಆಕ್ಟೋ 2026,

ಕಾರವಾರ: ತಾಲೂಕಿನ ಹಳಗಾ ಗ್ರಾಮದ ಪ್ರಸಿದ್ಧ ಶಕ್ತಿ ದೇವರಾದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಅಷ್ಟಮಂಗಲ ಪ್ರಶ್ನೆ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಶುಕ್ರವಾರ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ದೇವಸ್ಥಾನದ ಪೂಜಾ ಪದ್ಧತಿ, ಹಿಂದಿನ ಸಂಪ್ರದಾಯಗಳು ಹಾಗೂ ದೇವಾಲಯದ ನಿರ್ವಹಣೆಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

ಸುಮಾರು 300ರಿಂದ 400 ವರ್ಷಗಳ ಇತಿಹಾಸ ಹೊಂದಿದೆ ಎಂದು ಹೇಳಲಾಗುವ ಈ ದೇವಸ್ಥಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಕಾರ್ಯಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಿವೆಯೇ, ಹಿಂದಿನ ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದ ಪೂಜಾ ಪದ್ಧತಿಗಳು ಹಾಗೂ ಆಚರಣೆಗಳಲ್ಲಿ ಯಾವುದಾದರೂ ಬದಲಾವಣೆಗಳಾಗಿವೆಯೇ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನೆ ಕಾರ್ಯವನ್ನು ಆಯೋಜಿಸಲಾಗಿತ್ತು.

ಮರೆತುಹೋಗಿರುವ ಅಥವಾ ಕಾಲಕ್ರಮೇಣ ಆಚರಣೆಯಿಂದ ದೂರವಾಗಿರುವ ಹಳೆಯ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಪುನಃ ಅನುಸರಿಸುವ ಅಗತ್ಯವಿದೆಯೇ ಎಂಬುದರ ಬಗ್ಗೆಯೂ ದೇವಸ್ಥಾನದ ಆಡಳಿತ ಮಂಡಳಿ, ಊರಿನ ಹಿರಿಯರು ಹಾಗೂ ಭಕ್ತರು ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಮಾರ ನಾಯ್ಕ ಹಾಗೂ ಪದಾಧಿಕಾರಿಗಳು ಊರಿನ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಷ್ಟಮಂಗಲ ಪ್ರಶ್ನೆ ಕಾರ್ಯದ ಮೂಲಕ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಮಾರ್ಗದರ್ಶನ ಪಡೆಯಲು ಮುಂದಾಗಿದ್ದರು. ಅದರಂತೆ ಶುಕ್ರವಾರ ನಡೆದ ಅಷ್ಟಮಂಗಲ ಪ್ರಶ್ನೆ ಕಾರ್ಯ ಬರೋಬ್ಬರಿ ನಾಲ್ಕರಿಂದ ಐದು ಗಂಟೆಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾ ಕ್ರಮಗಳು, ಧಾರ್ಮಿಕ ಆಚರಣೆಗಳು, ದೇವಾಲಯದ ಸಂರಕ್ಷಣೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಷ್ಟಮಂಗಲ ಜ್ಯೋತಿಷಿ ನಾಗಾನಂದ ಭಟ್ ಅವರು ವಿವರಿಸಿದರು ಎಂದು ತಿಳಿದುಬಂದಿದೆ.

ಅಷ್ಟಮಂಗಲ ಪ್ರಶ್ನೆಯ ವೇಳೆ ದೇವಸ್ಥಾನದಲ್ಲಿ ಸರಿಪಡಿಸಬೇಕಾದ ಕೆಲವು ಲೋಪದೋಷಗಳು ಕಂಡುಬಂದಿದ್ದು, ಅವುಗಳ ಪರಿಹಾರಕ್ಕಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಂತೆ ಜ್ಯೋತಿಷಿ ನಾಗಾನಂದ ಭಟ್ ಸೂಚಿಸಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಹಿಂದಿನ ಸಂಪ್ರದಾಯಗಳಿಗೆ ಅನುಗುಣವಾಗಿ ಪೂಜಾ ಪದ್ಧತಿಗಳನ್ನು ಮುಂದುವರಿಸುವುದು, ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದು ಹಾಗೂ ದೇವಾಲಯವನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಿ ಕೊಂಡೊಯ್ಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಾರ್ಗದರ್ಶನ ನೀಡಲಾಗಿದೆ.

ಇದಲ್ಲದೆ, ದೇವಸ್ಥಾನದಲ್ಲಿರುವ ಐದು ಪರಿವಾರ ದೇವರುಗಳಿಗೆ ಸಂಬಂಧಿಸಿದ ವಿಚಾರಗಳು ಹಾಗೂ ದೇವಾಲಯದಲ್ಲಿರುವ ಬಂಗಾರದ ಪ್ರಮಾಣದ ಕುರಿತಾಗಿಯೂ ಅಷ್ಟಮಂಗಲ ಪ್ರಶ್ನೆಯಲ್ಲಿ ವಿವರಿಸಲಾಗಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಧಾರ್ಮಿಕ ಪರಂಪರೆಯನ್ನು ಅರಿತುಕೊಂಡು, ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಗಳನ್ನು ಸೂಕ್ತವಾಗಿ ಪಾಲಿಸುವ ಮೂಲಕ ದೇವಾಲಯದ ಪಾವಿತ್ರ್ಯ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಉದ್ದೇಶ ಈ ಕಾರ್ಯದ ಹಿಂದಿದೆ.

ಅಷ್ಟಮಂಗಲ ಪ್ರಶ್ನೆ ಕಾರ್ಯದ ಸಂದರ್ಭದಲ್ಲಿ ಊರಿನ ಹಿರಿಯರು, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250