ಭಟ್ಕಳ: ಬಂದೂಕು ಸೇರಿದಂತೆ ಆಯುಧ ಪರವಾನಗಿ ಹೊಂದಿರುವವರು ಅವಧಿ ಮುಕ್ತಾಯಕ್ಕೂ ಮುನ್ನ ನಿಗದಿತ ಅವಧಿಯೊಳಗೆ ನವೀಕರಣಕ್ಕೆ ಅರ್ಜಿ ಸಲ್ಲಿಸುವಂತೆ ಭಟ್ಕಳ ತಹಸೀಲ್ದಾರ್ ಕಚೇರಿ ಪ್ರಕಟಣೆ ಮೂಲಕ ಸೂಚಿಸಿದೆ.
ಆಯುಧ ನಿಯಮಾವಳಿ–2016ರ ನಿಯಮ 24ರ ಪ್ರಕಾರ, ಪರವಾನಗಿ ಅವಧಿ ಮುಕ್ತಾಯಗೊಳ್ಳುವ ಕನಿಷ್ಠ 60 ದಿನಗಳ ಮುಂಚಿತವಾಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. 2026ರ ಡಿಸೆಂಬರ್ 31ರಂದು ಅವಧಿ ಮುಕ್ತಾಯಗೊಳ್ಳುವ ಆಯುಧ ಪರವಾನಗಿದಾರರು ಅಗತ್ಯ ದಾಖಲೆಗಳೊಂದಿಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ನವೀಕರಣಕ್ಕಾಗಿ ಮೂಲ ಆಯುಧ ಪರವಾನಗಿ, ನಮೂನೆ ಎ-3ರಲ್ಲಿ ಭರ್ತಿ ಮಾಡಿದ ಅರ್ಜಿ, ನಮೂನೆ ಎಸ್-3ರ ವೈದ್ಯಕೀಯ ಪ್ರಮಾಣಪತ್ರ, ಹಿಡುವಳಿ ಪ್ರಮಾಣಪತ್ರ ಹಾಗೂ ಜಮೀನಿನ ಪಹಣಿ ಪತ್ರಿಕೆಯನ್ನು ಸಲ್ಲಿಸಬೇಕು. ಐದು ವರ್ಷಗಳ ಅವಧಿಗೆ ಪರವಾನಗಿ ನವೀಕರಿಸಲು ₹2,500 ಶುಲ್ಕ ನಿಗದಿಪಡಿಸಲಾಗಿದೆ.
ಶುಲ್ಕ ಪಾವತಿಗಾಗಿ ಕೆ-2 ತಂತ್ರಾಂಶದಲ್ಲಿ ನಿಗದಿತ ಲೆಕ್ಕ ಶೀರ್ಷಿಕೆಯಡಿ ಚಲನ್ ಸೃಷ್ಟಿಸಿ, ಶುಲ್ಕ ಪಾವತಿಸಿದ ಮೂಲ ಚಲನ್ನ್ನು ಇತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗೆ ಲಗತ್ತಿಸಬೇಕು. ಪರವಾನಗಿ ಅವಧಿ ಮುಕ್ತಾಯವಾಗುವ ಮುನ್ನವೇ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
