ಬರುವ ಫೆ.11ಕ್ಕೆ ಕುಮಾರಸ್ವಾಮಿ ಕಾರವಾರಕ್ಕೆ
ಕಾರವಾರ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಸಂಘಟನೆಯನ್ನು ಬಲಪಡಿಸಿಕೊಂಡಿದ್ದು, ಅದರ ಮೇಲಿನ ವಿಶ್ವಾಸದಿಂದಲೇ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕಾರವಾರ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರಯತ್ನಿಸುವ ಉದ್ದೇಶದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ ಎಂದರು.
ತಮ್ಮ ತಂದೆ ದಿವಂಗತ ವಸಂತ ಅಸ್ನೋಟಿಕರ್ ಹಾಗೂ ತಾಯಿ ದಿವಂಗತ ಶುಭಲತಾ ಅಸ್ನೋಟಿಕರ್ ಅವರ ಅಭಿಮಾನಿಗಳು ಇಂದಿಗೂ ಜಿಲ್ಲೆಯಲ್ಲಿದ್ದಾರೆ. ಅವರ ಮೇಲಿನ ಜನರ ಪ್ರೀತಿ ಮತ್ತು ವಿಶ್ವಾಸ ನನಗೆ ರಾಜಕೀಯವಾಗಿ ಪ್ರೇರಣೆ ನೀಡುತ್ತಿದೆ. ಇದರೊಂದಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಶೀರ್ವಾದವೂ ನನಗಿದೆ ಎಂದು ತಿಳಿಸಿದರು.
ಕಾರವಾರ ಕ್ಷೇತ್ರದ ಅಭಿವೃದ್ಧಿಯನ್ನು ಪ್ರಮುಖ ಗುರಿಯಾಗಿಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಲು ಉದ್ದೇಶಿಸಿದ್ದು, ಸಂಘಟನೆಯ ಬಲದೊಂದಿಗೆ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮುಂದುವರಿಸುವುದಾಗಿ ಅವರು ಹೇಳಿದರು.
