ಕುಮಟಾ ತಾಲೂಕಿನ ಅಳ್ವೆಕೊಡಿ ಗ್ರಾಮದ ವಿದ್ಯಾನಗರದ ಬಳಿ ಜೂನ್ 17ರಂದು ತಡರಾತ್ರಿ ನಡೆದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ದಾಳಿಯ ಸುಳಿವು ಅರಿತು ಐವರು ಜೂಜುಕೋರರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ದೇವಗುಂಡಿ ಬಳಿ ವಾಸವಾಗಿರುವ ಅಳ್ವೆಕೊಡಿಯ ಹರಿಶ್ಚಂದ್ರ ಈಶ್ವರ ಪಟಗಾರ ಎಂಬಾತ ಜೂನ್ 17ರಂದು ರಾತ್ರಿ ತನ್ನ ಸ್ನೇಹಿತರನ್ನು ಜೂಜಾಟಕ್ಕೆ ಆಮಂತ್ರಿಸಿದ್ದನು. ಅದರಂತೆ ಅಳ್ವೆಕೊಡಿ ಗ್ರಾಮದ ವಿದ್ಯಾನಗರದ ಬಳಿ ಒಟ್ಟುಗೂಡಿದ್ದ ಅಳ್ವೆಕೊಡಿಯ ಸಂತೋಷ ನಾಯ್ಕ, ಇಲೆಕ್ಟ್ರಿಷಿಯನ್ ವೆಂಕಟೇಶ ಮಾಸ್ತಿ ನಾಯ್ಕ, ಕೂಲಿ ಕಾರ್ಮಿಕ ರಾಜೇಶ ಗಣಪತಿ ನಾಯ್ಕ, ಪಾಂಡುರಂಗ ನಾಗಪ್ಪ ಗಾವಡಿ, ಜನಾರ್ಧನ ಮಾಧವ ನಾಯ್ಕ (ಜಾನು), ಕುಮಟಾ ಮಾರುತಿ ಶೋರೂಮ್ ಉದ್ಯೋಗಿ ರಮೇಶ ನಾಯ್ಕ, ಎಪಿಎಂಸಿ ಹಮಾಲಿ ಕೆಲಸಗಾರ ಗಜಾನನ ರಾಮಾ ನಾಯ್ಕ ಹಾಗೂ ನಾಯ್ಕ ಸ್ಟೀಲ್ ಬಳಿ ಕೂಲಿ ಕೆಲಸ ಮಾಡುವ ನಾಗೇಂದ್ರ ಈಶ್ವರ ಪಟಗಾರ ಸೇರಿಕೊಂಡು ರಾತ್ರಿ 11 ಗಂಟೆಯಾದರೂ ‘ಅಂದರ್ ಬಾಹರ್’ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದರು.
ಈ ಕಾನೂನುಬಾಹಿರ ಜೂಜಾಟದ ಕುರಿತು ಸಾರ್ವಜನಿಕರಿಂದ ಖಚಿತ ಮಾಹಿತಿ ಪಡೆದ ಪಿಎಸ್ಐ ರವಿ ಗುಡಿ ಅವರು ತಮ್ಮ ವಿಶೇಷ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದರು. ಪೊಲೀಸರನ್ನು ನೋಡುತ್ತಿದ್ದಂತೆ ರಮೇಶ ನಾಯ್ಕ, ಗಜಾನನ ನಾಯ್ಕ, ಸಂತೋಷ ನಾಯ್ಕ, ಜನಾರ್ಧನ ನಾಯ್ಕ ಹಾಗೂ ನಾಗೇಂದ್ರ ಪಟಗಾರ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ. ಆದರೆ, ಸ್ಥಳದಲ್ಲಿದ್ದ ಹರಿಶ್ಚಂದ್ರ ಪಟಗಾರ, ವೆಂಕಟೇಶ ನಾಯ್ಕ, ರಾಜೇಶ ನಾಯ್ಕ ಮತ್ತು ಪಾಂಡುರಂಗ ಗಾವಡಿ ಅವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳು ತಮ್ಮೊಂದಿಗೆ ಜೂಜಾಟದಲ್ಲಿ ಭಾಗವಹಿಸಿ ಓಡಿಹೋದ ಇತರ ಐವರ ಹೆಸರುಗಳನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ದಾಳಿಯ ವೇಳೆ ಜೂಜಾಟಕ್ಕೆ ಬಳಸಿದ್ದ 5,080 ರೂಪಾಯಿ ನಗದು ಹಾಗೂ ಇನ್ನಿತರ ಪರಿಕರಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಸದ್ಯ ಓಡಿ ಹೋದ ಆರೋಪಿಗಳ ಹೆಸರನ್ನೂ ಪ್ರಕರಣದಲ್ಲಿ ದಾಖಲಿಸಿಕೊಂಡಿರುವ ಪೊಲೀಸರು, ಅವರ ಪತ್ತೆಗಾಗಿ ಜಾಲ ಬೀಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
