ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಾಳದಕಟ್ಟಾದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಶಿರಸಿ-ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂಟಿ ಮಹಿಳೆಗೆ ಕತ್ತಿ ತೋರಿಸಿ, ಜೀವಬೆದರಿಕೆಯೊಡ್ಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದ ಕೊಂಡ್ಲಿ ನಿವಾಸಿ, ಕೂಲಿ ಕಾರ್ಮಿಕ ಮಹೇಶ ಹನುಮಂತ ಮಡಿವಾಳ ಎಂಬಾತನೇ ಈ ಕೃತ್ಯದ ಅಸಲಿ ಆರೋಪಿಯಾಗಿದ್ದು, ಸದ್ಯ ಆತ ಕಂಬಿ ಎಣಿಸುತ್ತಿದ್ದಾನೆ. ಜೂನ್ 22ರ ಸಾಯಂಕಾಲ ಹಾಳದಕಟ್ಟಾದ ನಿವಾಸಿ ಪೂನಂ ಗಣಪತಿ ಶೇಟ್ ಅವರ ಮನೆಗೆ ಅಕ್ರಮವಾಗಿ ನುಗ್ಗಿದ್ದ ಈತ, ಮಾರಕಾಸ್ತ್ರ ಪ್ರದರ್ಶಿಸಿ ಕುತ್ತಿಗೆಯಲ್ಲಿದ್ದ ಸರ ನೀಡುವಂತೆ ಹೆದರಿಸಿದ್ದ. ಈ ವೇಳೆ ಪೂನಂ ಅವರು ದರೋಡೆಕೋರನಿಂದ ತಪ್ಪಿಸಿಕೊಳ್ಳಲು ಧೈರ್ಯದಿಂದ ಪ್ರಯತ್ನಿಸಿದರಾದರೂ, ಅದಕ್ಕೆ ಅವಕಾಶ ನೀಡದ ಆರೋಪಿ ಮಹೇಶ, ಬಲವಂತವಾಗಿ ಚಿನ್ನದ ಸರವನ್ನು ತುಂಡರಿಸಿ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದ.
ತನ್ನನ್ನು ದೋಚಿದ ಅಪರಿಚಿತನ ಗುರುತು ಪೂನಂ ಶೇಟ್ ಅವರಿಗೆ ಸಿಗದಿದ್ದರೂ, ಅವರು ಎದೆಗುಂದದೆ ತಮಗಾದ ಅನ್ಯಾಯದ ವಿರುದ್ಧ ಪೊಲೀಸರ ಮೊರೆ ಹೋಗಿದ್ದರು. ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣ ಕಳವಾಗಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ನಿರ್ದೇಶನದ ಮೇರೆಗೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ಆರೋಪಿ ಪತ್ತೆಗಾಗಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು.
ಕಾರ್ಯಾಚರಣೆಗೆ ಇಳಿದ ಸಿದ್ದಾಪುರ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ, ಪಿಎಸ್ಐಗಳಾದ ನಾಗಪ್ಪ ಮತ್ತು ಶಾಂತಿನಾಥ ಪಾಸಾನೆ ಅವರ ತಂಡಕ್ಕೆ ಎಸೈಗಳಾದ ಸಂಗೀತಾ ಕಾನಡೆ, ರಮೇಶ ಗೌಡ ಹಾಗೂ ಶಿರಸಿ ಮತ್ತು ಸಿದ್ದಾಪುರ ಠಾಣೆಯ ದಕ್ಷ ಸಿಬ್ಬಂದಿಗಳಾದ ಪ್ರಕಾಶ ಪಟಗಾರ, ರಮೇಶಪ್ಪಾ ಕೂಡಲ್, ಮಣಿಕಂಠ ಎಂ.ಆರ್., ಗಿರೀಶಯ್ಯ ಎಂ.ಎಸ್., ಪ್ರಕಾಶ ಮಲ್ಲಾಡದ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೋಡ್, ಧನಂಜಯ ಮಡಿವಾಳ, ರಾಮಯ್ಯ ಪೂಜಾರಿ ಮತ್ತು ಹನುಮಂತ ಮಂಕಾಪುರ ಸಾಥ್ ನೀಡಿದರು. ಈ ಜಂಟಿ ತಂಡವು ಆಧುನಿಕ ತಾಂತ್ರಿಕ ದಾಖಲೆಗಳು ಹಾಗೂ ಸೂಕ್ಷ್ಮ ಸುಳಿವುಗಳನ್ನು ಬೆನ್ನತ್ತಿ ತನಿಖೆ ಚುರುಕುಗೊಳಿಸಿತು.
ವಿವಿಧ ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ವಿಚಾರಣೆಗಳ ಆಧಾರದ ಮೇಲೆ ಕೊಂಡ್ಲಿಯ ಕೂಲಿ ಕಾರ್ಮಿಕ ಮಹೇಶ ಮಡಿವಾಳನ ಮೇಲೆ ಪೊಲೀಸರಿಗೆ ತೀವ್ರ ಅನುಮಾನ ವ್ಯಕ್ತವಾಯಿತು. ತದನಂತರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಮಹಿಳೆಯ ಮನೆಗೆ ನುಗ್ಗಿ ದರೋಡೆ ಮಾಡಿದ ಕೃತ್ಯವನ್ನು ಆತನೇ ಎಸಗಿರುವುದು ಸಾಕ್ಷ್ಯಸಮೇತ ಖಚಿತವಾಯಿತು. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಆತ ಕಳ್ಳತನ ಮಾಡಿದ್ದ ಚಿನ್ನದ ತಾಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಜಪ್ತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
