ಕಾರವಾರ: ತಾಲೂಕಿನ ಕದ್ರಾ ಮಾರ್ಗವಾಗಿ ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾರವಾರ ತಹಶೀಲ್ದಾರ್ ಅವರು ಆಸ್ನೋಟಿ ಸಮೀಪ ಭೇಟಿಯಾಡಿ ವಶಪಡಿಸಿಕೊಂಡಿದ್ದಾರೆ.

ಗೋವಾ ಕಡೆಗೆ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಮರಳು ತುಂಬಿದ ವಾಹನವನ್ನು ಗಮನಿಸಿದ ತಹಶೀಲ್ದಾರ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಗಿ ಅಥವಾ ಮಾನ್ಯ ದಾಖಲೆಗಳು ಚಾಲಕನ ಬಳಿ ಇಲ್ಲದಿರುವುದು ಬೆಳಕಿಗೆ ಬಂದಿದೆ. ನಿಯಮ ಬಾಹಿರವಾಗಿ ಮರಳು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ವಾಹನವನ್ನು ಜಪ್ತಿ ಮಾಡಿ ಕಾರವಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ.
ಮಾಜಾಳಿ ತಪಾಸಣಾ ಠಾಣೆಯಲ್ಲಿ (Checkpost) ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇದೆ, ಹಾಗೂ ಅಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಬಾಡಿ ಕ್ಯಾಮೆರಾಗಳನ್ನೂ ಒದಗಿಸಲಾಗಿದೆ. ಇಷ್ಟೆಲ್ಲಾ ಹೈಟೆಕ್ ಭದ್ರತಾ ವ್ಯವಸ್ಥೆ ಇದ್ದಾಗಲೂ ಗೋವಾಕ್ಕೆ ಅಕ್ರಮ ಮರಳು ಸಾಗಾಟ ನಿರಂತರವಾಗಿ ಹೇಗೆ ನಡೆಯುತ್ತಿದೆ ಎಂದು ಸ್ಥಳೀಯ ನಾಗರಿಕರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಚೆಕ್‌ಪೋಸ್ಟ್ ಸೇರಿದಂತೆ ಸಂಬಂಧಿತ ಇಲಾಖೆಗಳ ಕಣ್ಣು ತಪ್ಪಿಸಿ ಅಥವಾ ಅವರ ಶಾಮೀಲಾತಿಯಿಂದ ಈ ದಂಧೆ ನಡೆಯುತ್ತಿದೆಯೇ ಎಂಬ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಾರವಾರ ತಹಶೀಲ್ದಾರ್ ಎನ್.ಎಫ್ ನರೋಹ್ನಾ ಅವರ ಕ್ಷೇತ್ರ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
