ಶಿರಸಿ:ಮುಂಬಯಿನ ಪ್ರತಿಷ್ಠಿತ ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದಿದ್ದ ಬರೋಬ್ಬರಿ 1.5 ಕೆಜಿ ಬಂಗಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಡಗಿ ಕುಳಿತಿದ್ದ ಪ್ರಮುಖ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಶಿರಸಿ ನಗರದ ನೆಹರೂನಗರದ ನಿವಾಸಿಯಾದ ಯೂಸೂಫ್ ಇಕ್ಬಾಲ್ (54) ಬಂಧಿತ ಆರೋಪಿಯಾಗಿದ್ದಾನೆ. ಮುಂಬೈನಲ್ಲಿ ಕಳ್ಳತನ ನಡೆಸಿದ ಬಳಿಕ ಪೊಲೀಸರಿಂದ ತಪ್ಪಿಸೊಂಡು ಶಿರಸಿಗೆ ಬಂದು ಈತ ತಲೆಮರೆಸಿಕೊಂಡಿದ್ದ. ಈ ಭಾರಿ ಕಳ್ಳತನ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳು ಭಾಗಿಯಾಗಿದ್ದು, ಎಲ್ಲರೂ ದೇಶದ ವಿವಿಧೆಡೆ ಪರಾರಿಯಾಗಿದ್ದರು. ಈ ನಡುವೆ, ಪ್ರಮುಖ ಆರೋಪಿ ಯೂಸೂಫ್ ಶಿರಸಿಯಲ್ಲೇ ತಂಗಿರುವ ಬಗ್ಗೆ ಮುಂಬೈ ಪೊಲೀಸರಿಗೆ ಖಚಿತ ಮಾಹಿತಿ ಇತ್ತು. ಇದರ ಆಧಾರದ ಮೇಲೆ ತಕ್ಷಣವೇ ಶಿರಸಿಗೆ ಧಾವಿಸಿದ ಮುಂಬೈ ಪೊಲೀಸರು, ಸ್ಥಳೀಯ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೆರವು ಪಡೆದು ಯೂಸೂಫ್ ಅಡಗುದಾಣದ ಮೇಲೆ ದಾಳಿ ನಡೆಸಿದರು. ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಯೂಸೂಫ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಬಂಧನದ ಬೆನ್ನಲ್ಲೇ ಆತನನ್ನು ಶಿರಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೆಚ್ಚಿನ ತನಿಖೆಗಾಗಿ ಮುಂಬೈಗೆ ಕರೆದೊಯ್ದಿದ್ದಾರೆ.
ಈ ಭಾರಿ ಚಿನ್ನದ ಬೇಟೆಯಾಡಿದ ಉಳಿದ ನಾಲ್ವರು ಕಳ್ಳರಿಗಾಗಿ ಮುಂಬೈ ಪೊಲೀಸರು ದೇಶದಾದ್ಯಂತ ತೀವ್ರ ಜಾಲ ಬೀಸಿದ್ದು, ಶೀಘ್ರದಲ್ಲೇ ಉಳಿದವರೂ ಪತ್ತೆಯಾಗುವ ಸಾಧ್ಯತೆ ಇದೆ.