ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಕೈಗಾದಲ್ಲಿ ಸ್ಥಳೀಯನ ದರ್ಪ: ಅಧಿಕಾರಿಗೆ ಜೀವ ಬೆದರಿಕೆ!

Pakka News Web • 2 ಜುಲೈ 2026,

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ವಿಸ್ತರಣಾ ಕಾಮಗಾರಿಯಲ್ಲಿ ತೊಡಗಿರುವ ಪ್ರತಿಷ್ಠಿತ ಮೇಘಾ ಇಂಜಿನಿಯರಿಂಗ್ ಕಂಪನಿ’ಯ ಕಚೇರಿಯಲ್ಲೇ ಅಧಿಕಾರಿಯೊಬ್ಬರಿಗೆ ಬಹಿರಂಗವಾಗಿ ಪ್ರಾಣ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಗುತ್ತಿಗೆ ಕೆಲಸ ಹಾಗೂ ವಾಹನಗಳ ಹಂಚಿಕೆ ವಿಚಾರದಲ್ಲಿ ತಾನು ಹೇಳಿದಂತೆಯೇ ಕೇಳಬೇಕು ಎಂದು ಹಠ ಹಿಡಿದು, ಕಂಪನಿಯ ಡೆಪ್ಯೂಟಿ ಮ್ಯಾನೇಜರ್‌ಗೆ ಜೀವ ಬೆದರಿಕೆ ಒಡ್ಡಿದ ಮಲ್ಲಾಪುರದ ಹಿಂದೂವಾಡಾ ನಿವಾಸಿ ಅಂಬ್ರಿಷ್ ಬಾಂದೇಕರ್ ಎಂಬಾತನ ವಿರುದ್ಧ ಸದ್ಯ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಸೂಕ್ಷ್ಮ ಹಾಗೂ ಅತ್ಯಂತ ಭದ್ರತೆಯ ವಲಯ ಎನಿಸಿಕೊಂಡಿರುವ ಕೈಗಾ ಪರಿಸರದಲ್ಲಿ ನಡೆದ ಈ ಗೂಂಡಾವರ್ತನೆ ಈಗ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ.

ದೂರಿನ ಅನ್ವಯ, ಕಳೆದ ಜೂನ್ 27ರಂದು ಬೆಳಿಗ್ಗೆ ಕಂಪನಿಯ ಕಚೇರಿಗೆ ಅಕ್ರಮವಾಗಿ ನುಗ್ಗಿದ ಆರೋಪಿ ಅಂಬ್ರಿಷ್ ಬಾಂದೇಕರ್, ಅಲ್ಲಿನ ಪ್ರಾದೇಶಿಕ ಭಿನ್ನತೆಯನ್ನು ಕೆದಕುತ್ತಾ ದರ್ಪ ಪ್ರದರ್ಶಿಸಿದ್ದಾನೆ. ನೀವೆಲ್ಲ ಹೊರ ರಾಜ್ಯದಿಂದ ಬಂದವರು, ಇಲ್ಲಿ ನನ್ನ ಅಣತಿಯಂತೆಯೇ ನಡೆಯಬೇಕು ಎಂದು ಆರ್ಭಟಿಸಿರುವ ಆತ, ತಾನು ಶಿಫಾರಸು ಮಾಡಿದ ವ್ಯಕ್ತಿಗಳಿಗೆ ಮಾತ್ರ ಕೆಲಸ ಕೊಡಬೇಕು ಮತ್ತು ಉತ್ತಮ ವಾಹನಗಳನ್ನು ಅವರಿಗೇ ನೀಡಬೇಕು ಎಂದು ತಾಕೀತು ಮಾಡಿದ್ದಾನೆ. ಅಷ್ಟೇ ಅಲ್ಲದೆ, ಹೊರ ರಾಜ್ಯದ ಚಾಲಕರಿಗೆ ಹಳೆಯ ವಾಹನಗಳನ್ನು ಕೊಟ್ಟು, ಕೆಲಸದ ಸಮಯವನ್ನೂ ತನ್ನ ಇಷ್ಟದಂತೆ ಬದಲಾಯಿಸಬೇಕು ಎಂದು ಕಾನೂನುಬಾಹಿರ ಬೇಡಿಕೆಗಳನ್ನಿಟ್ಟಿದ್ದಾನೆ. ತನ್ನ ಈ ಹಠಮಾರಿ ಧೋರಣೆಗೆ ಒಪ್ಪದಿದ್ದರೆ ಜಾಗದಲ್ಲೇ ಮುಗಿಸಿಬಿಡುವುದಾಗಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಯಲ್ಲೇ ಆತಂಕದ ವಾತಾವರಣ ಸೃಷ್ಟಿಸಿದ್ದಾನೆ.

ಈ ಉದ್ಧಟತನದ ವರ್ತನೆಯಿಂದ ಕಂಗೆಟ್ಟ ಕಂಪನಿಯ ಮೆಕ್ಯಾನಿಕಲ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ವೆಂಕಟನಾಯಡು ಚಿನ್ನ ವೆಂಕಟಯ್ಯಾ ಪೊತೂರ ಅವರು ತಕ್ಷಣವೇ ಮಲ್ಲಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿ ಲಿಖಿತ ದೂರು ದಾಖಲಿಸಿದ್ದಾರೆ. ಕೈಗಾದಂತಹ ರಾಷ್ಟ್ರೀಯ ಮಹತ್ವದ ಯೋಜನೆಯ ಕಾಮಗಾರಿ ನಡೆಸುವ ಸಂಸ್ಥೆಯ ಉನ್ನತ ಅಧಿಕಾರಿಗೆ ಕಚೇರಿಯ ಒಳಗೇ ಬೆದರಿಕೆ ಹಾಕಿರುವುದು ಕೈಗಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಲ್ಲಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250